ಹುಳಿಯಾರು:

      ಹುಳಿಯಾರು ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿಯ ನೂತನ ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಕೆ.ಮರಿಯಪ್ಪ, ಡಿ.ಆರ್.ಚಿದಾನಂದ್ ಅವರು ದಸೂಡಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳಿಗೆ ಥರ್ಮಲ್ ಸ್ಕ್ಯಾನರ್ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

      ಕೊರೊನಾ ಆತಂಕದ ನಡುವೆ ಸರ್ಕಾರ ಶಾಲೆಗಳನ್ನು ಆರಂಭಿಸಿದೆ. ಪೋಷಕರೂ ಸಹ ಭಯದಿಂದಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಹಾಗಾಗಿ ಶಾಲೆಯಲ್ಲಿ ಕೊರೊನಾ ನುಸುಳದಂತೆ ಎಚ್ಚರ ವಹಿಸುವ ಸಲುವಾಗಿ ಶಾಲೆಗೆ ಬರುವ ಮಕ್ಕಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಲಭ್ಯವಿಲ್ಲದ ಥರ್ಮಲ್ ಸ್ಕ್ಯಾನರ್ ಅನ್ನು ನೂತನ ಗ್ರಾಪಂ ಸದಸ್ಯರು ಶಾಲೆಗೆ ಕೊಡುಗೆಯಾಗಿ ನೀಡಿ ಕೋವಿಡ್ ನಿಯಮ ಪಾಲನೆಗೆ ನೆರವಾಗಿದ್ದಾರೆ.

      ಅಲ್ಲದೆ ಶಾಲೆಗೆ ಬರುವ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳನ್ನೂ ಸಹ ಉಚಿತವಾಗಿ ವಿತರಿಸಿದರು. ಕೋವಿಡ್ ಭಯ ಎಲ್ಲೆಡೆ ಇದ್ದು ಸುರಕ್ಷತೆಗೆ ಆದ್ಯತೆ ನೀಡುವ ಅಗತ್ಯತೆಯನ್ನು ಮನಗಂಡು ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್‍ಗಳನ್ನು ಗ್ರಾಪಂ ಸದಸ್ಯರ ವಿತರಿಸಿರುವ ಈ ಸಮಾಜಮುಖಿ ಕಾರ್ಯಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

      ಗ್ರಾಪಂ ನೂತನ ಸದಸ್ಯ ಕೆ.ಮರಿಯಪ್ಪ ಅವರು ಮಾತನಾಡಿ ಹಳ್ಳಿಗಳಲ್ಲಿ ಮಾಸ್ಕ್ ಇಲ್ಲದೆ, ಕೊರೊನಾ ಪರೀಕ್ಷೆ ಮಾಡಿಸಲಾಗದೆ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ನೆರವಾಗಲು ಸ್ಕ್ಯಾನಿಂಗ್ ಯಂತ್ರ ಹಾಗೂ ಮಾಸ್ಕ್‍ಗಳನ್ನು ನೀಡಲಾಗುತ್ತಿದೆ. ಪೋಷಕರು ಯಾವುದೇ ಅಂಜಿಕೆ ಇಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದರು. ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 18 times, 1 visits today)