ತುಮಕೂರು :
ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಮ್ಯಾನ್ಯುಯಲ್ ಸಮೀಕ್ಷೆ ಮಾಡುವ ಮೂಲಕ ಬರುವ ಫೆಬ್ರುವರಿ 15ರೊಳಗಾಗಿ ಪಂಚತಂತ್ರದಲ್ಲಿ ಅಳವಡಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವಂತೆ ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಸಮೀಕ್ಷೆ ಮತ್ತು ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಪರಿಶೀಲನಾ ಸಭೆ ಹಾಗೂ ತರಬೇತಿ ಕಾರ್ಯಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು 2019-20ರ ಆಯವ್ಯಯದಲ್ಲಿ ಮ್ಯಾನ್ಯುಯಲ್ ಸಮೀಕ್ಷೆಗೆ ಅನುಮೋದನೆ ನೀಡಿದ್ದು, ಕಳೆದ ವರ್ಷ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಡಗೂರು ಗ್ರಾಮ ಪಂಚಾಯತ್‍ನಲ್ಲಿ ಪ್ರಾಯೋಗಿಕವಾಗಿ ಮ್ಯಾನ್ಯುಯಲ್ ಸಮೀಕ್ಷೆಯ ಪೈಲಟ್ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಮೊದಲನೇ ಹಂತದಲ್ಲಿ ಕಳೆದ ವರ್ಷ ಜನವರಿ 24 ರಿಂದ ಪ್ರತಿ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿವಾರು ಸಾಧಿಸಿದ ಮ್ಯಾನ್ಯುಯಲ್ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಸಕ್ತ ವರ್ಷದಿಂದ ಜಿಲ್ಲೆಯ ಎಲ್ಲಾ 331 ಗ್ರಾಮ ಪಂಚಾಯಿತಿಗಳಲ್ಲಿಯೂ ಈ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕಾಗಿದೆ. ಪ್ರತಿ ತಾಲ್ಲೂಕಿನಿಂದ ಆಯ್ದ 5 ಗ್ರಾಮ ಪಂಚಾಯಿತಿಗಳ ಪಿ.ಡಿ.ಒ.ಗಳಿಗೆ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮ್ಯಾನ್ಯುಯಲ್ ಸಮೀಕ್ಷೆ ಮಾಡಿದ ನಂತರ ಉಪನೊಂದಣಾಧಿಕಾರಿಗಳ(ಎಸ್‍ಆರ್‍ಒ) ಆಸ್ತಿಗಳ ನಿಗಧಿತ ಮೌಲ್ಯದ ಆಧಾರದಲ್ಲಿ (ಅಚಿಠಿiಣಚಿಟ vಚಿಟue) ಕಡ್ಡಾಯವಾಗಿ ತೆರಿಗೆ ಪರಿಷ್ಕರಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಾಗೂ ಇದುವರೆಗೂ ತೆರಿಗೆಗೆ ಒಳಪಡಿಸದೆ ಇರುವ ಆಸ್ತಿಗಳನ್ನು ಗುರುತಿಸಿ ನಿಗಧಿತ ನಮೂನೆಗಳಾದ ನಮೂನೆ-9 ನಮೂನೆ-9ಎ, 11ಎ, ಮತ್ತು 11ಬಿ ವಹಿಗಳಲ್ಲಿ ದಾಖಲಿಸುವುದು ಬಹುಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶಗಳಲ್ಲಿ ಸೇರ್ಪಡೆಗೊಳ್ಳದೇ ಇರುವ ಆಸ್ತಿಗಳನ್ನು ಗುರುತಿಸಿ ಸೇರ್ಪಡೆಗೊಳಿಸುವುದು ಮತ್ತು ಸದರಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು, ಪಂಚತಂತ್ರ ತಂತ್ರಾಂಶದಲ್ಲಿ ಸೇರ್ಪಡೆಗೊಂಡಿದ್ದರೂ ಕೂಡ ಇ-ಸ್ವತ್ತು ತಂತ್ರಾಂಶದಲ್ಲಿ ಸೇರ್ಪಡೆಗೊಂಡಿಲ್ಲದೆ ಇರುವ ಆಸ್ತಿಗಳನ್ನು ಸೇರ್ಪಡೆಗೊಳಿಸಿ ತೆರಿಗೆ ವ್ಯಾಪ್ತಿಗೆ ತರುವುದು, ಈಗಾಗಲೇ ಇ-ಸ್ವತ್ತು ತಂತ್ರಾಂಶದಲ್ಲಿ ಸೇರ್ಪಡೆಗೊಂಡಿರುವ ಆಸ್ತಿಗಳನ್ನು ಪರಿಶೀಲಿಸಿ ದೃಢೀಕರಿಸಿರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಫೆಬ್ರವರಿ 15ನೇ ತಾರೀಖಿನೊಳಗೆ ಗ್ರಾಮ ಪಂಚಾಯಿತಿಗಳಲ್ಲಿ ಮ್ಯಾನ್ಯುಯಲ್ ಸಮೀಕ್ಷೆ ಪೂರ್ಣಗೊಳಿಸಲು ಎಲ್ಲಾ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ಉಪಕಾರ್ಯದರ್ಶಿ(ಅಭಿವೃದ್ಧಿ) ಟಿ.ಕೆ.ರಮೇಶ್ ಮಾತನಾಡಿ ಆಯುಕ್ತರ ಸೂಚನೆಯಂತೆ ನಿಗಧಿತ ದಿನಾಂಕದೊಳಗೆ ಪ್ರಗತಿ ಸಾಧಿಸುವಂತೆ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಉಪನಿರ್ದೇಶಕರು, ತುಮಕೂರು ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ರಾಜ್ಯ ಸಂಪ್ಮೂನೂಲ ವ್ಯಕ್ತಿಗಳಾದ ಕೆ.ಜಿ ಜಗದೀಶ್ ಮಾತನಾಡಿ, ಯೋಜನೆಯ ಕ್ರಮಬದ್ಧವಾದ ಮ್ಯಾನ್ಯುಯಲ್ ಸಮೀಕ್ಷೆ ಕೈಗೊಳ್ಳಲು ಬಳಸಬೇಕಾದ ನಮೂನೆಗಳಲ್ಲಿರುವ ಅಂಶಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಬೇಕಾದ ಸರಿಯಾದ ಕ್ರಮಗಳ ಬಗ್ಗೆ ಹಾಗೂ ತೆರಿಗೆಯನ್ನು ಪರಿಷ್ಕರಿಸುವಾಗ ಪರಿಗಣಿಸಬೇಕಾದ ಅಂಶಗಳು ಮತ್ತು ಮಾನದಂಡಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಈಗಾಗಲೇ ಪೈಲಟ್ ಯೋಜನೆಯ ಅನುಷ್ಟಾನ ಸಂದರ್ಭದಲ್ಲಿ ಅನುಭವಕ್ಕೆ ಬಂದಿರುವ ಪ್ರಾಯೋಗಿಕ ಅಂಶಗಳ ಬಗ್ಗೆ ಹಿಮ್ಮಾಹಿತಿ ನೀಡಿ ಸಮೀಕ್ಷೆಯಲ್ಲಿನ ಸವಾಲುಗಳ ಬಗ್ಗೆ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಮಾರ್ಗದರ್ಶನ ನೀಡಿದರು.