ತುಮಕೂರು:
ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆಬ್ರುವರಿ 6 ಮತ್ತು 7ರಂದು ನಡೆಸಲು ಅಗತ್ಯ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ನೌಕರರ ಕ್ರೀಡಾ ಕೂಟವನ್ನು ನಗರದ ಕುಣಿಗಲ್ ರಸ್ತೆಯಲ್ಲಿರುವ ಎಸ್.ಎಸ್.ಐ.ಟಿ. ಕಾಲೇಜಿನ ಆವರಣದಲ್ಲಿ ನಡೆಸಲು ತೀರ್ಮಾನಿಸಿದ್ದು, ಕ್ರೀಡಾ ಕೂಟವನ್ನು ಯಾವುದೇ ಲೋಪದೋಷವಿಲ್ಲದಂತೆ ಅಚ್ಚುಕಟ್ಟಾಗಿ ನಡೆಸಲು ವಿವಿಧ ಅಧಿಕಾರಿಗಳನ್ನೊಳಗೊಂಡ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಿದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಸುಮಾರು 2ಸಾವಿರ ನೌಕರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಓ.ಓ.ಡಿ. ಸೌಲಭ್ಯ ನೀಡಲಾಗುವುದು. ಮೇಲಧಿಕಾರಿಗಳು ಆಸಕ್ತ ನೌಕರರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಬೇಕೆಂದು ನಿರ್ದೇಶನ ನೀಡಿದರು.
ಕ್ರೀಡಾ ಕೂಟ ನಡೆಯಲಿರುವ ಕ್ರೀಡಾಂಗಣವನ್ನು ಸಜ್ಜುಗೊಳಿಸುವುದರೊಂದಿಗೆ ಊಟ, ಕುಡಿಯುವ ನೀರು, ಆಂಬುಲೆನ್ಸ್, ಪೊಲೀಸ್ ಬಂದೋಬಸ್ತ್ ಹಾಗೂ ಮತ್ತಿತರ ಮೂಲಭೂತ ಸೌಕರ್ಯದ ವ್ಯವಸ್ಥೆ ಕಲ್ಪಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಅಜಯ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಿಡಿಪಿಐ ಸಿ. ನಂಜಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಇರ್ಫಾನ್, ತರಬೇತಿದಾರ ಇಸ್ಮಾಯಿಲ್, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಮತ್ತಿತರು ಇದ್ದರು.