ತುಮಕೂರು :
ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜ. 20 ರಂದು ರೈತರ ಪ್ರತಿಭಟನೆ ಬೆಂಬಲಿಸಿ ನಡೆಯಲಿರುವ ರಾಜಭವನ ಮುತ್ತಿಗೆ ಹೋರಾಟದ ಹಿನ್ನೆಲೆಯಲ್ಲಿ ನಗರದ ಎಸ್‍ಎಸ್‍ಐಟಿ ಕಾಲೇಜಿನಲ್ಲಿ ಶುಕ್ರವಾರ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಜ.20 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಗೆ ಜಿಲ್ಲೆಯಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕೆಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಪ್ರತಿ ಜಿಲ್ಲೆಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುತ್ತಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಹೊರಡಬೇಕೆಂದು ಸೂಚಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ 5 ಬಸ್, ಟೆಂಪೋ ಟ್ರಾವೆಲ್ಲರ್, ಟ್ರಾಕ್ಸ್‍ಗಳಲ್ಲಿ ಕನಿಷ್ಟ 300ರಿಂದ 350 ಮಂದಿ ಹೊರಡಬೇಕು, ಅಂದು ಬೆಳಿಗ್ಗೆ 11 ಗಂಟೆಯೊಳಗೆ ಫ್ರೀಢಂ ಪಾರ್ಕ್ ತಲುಪಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಿದರು.
ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಹಾಗೂ ವಿವಿಧ ಬ್ಲಾಕ್ ಅಧ್ಯಕ್ಷರುಗಳು ಈ ಜವಾಬ್ದಾರಿಯನ್ನು ಹೊತ್ತು ಕಾರ್ಯಕರ್ತರನ್ನು ಹೊರಡಿಸಬೇಕು ಎಂದ ಅವರು, ಮಧುಗಿರಿಯಿಂದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಪಾವಗಡದಿಂದ ಶಾಸಕ ವೆಂಕಟರವಣಪ್ಪ, ಕುಣಿಗಲ್‍ನಿಂದ ಶಾಸಕ ಡಾ.ಎಚ್.ಆರ್.ರಂಗನಾಥ್, ಶಿರಾದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೊರಟಗೆರೆ ಹಾಗೂ ತುಮಕೂರು ಗ್ರಾಮಾಂತರದಿಂದ ಡಾ.ಜಿ.ಪರಮೇಶ್ವರ್, ತಿಪಟೂರಿನಿಂದ ಮಾಜಿ ಶಾಸಕ ಕೆ.ಷಡಕ್ಷರಿ, ತುಮಕೂರಿನಿಂದ ಡಾ.ಎಸ್.ರಫೀಕ್ ಅಹಮ್ಮದ್, ಗುಬ್ಬಿಯಿಂದ ಹೊನ್ನಗಿರಿಗೌಡ, ತುರುವೇಕೆರೆಯಿಂದ ಚೌದ್ರಿ ರಂಗಪ್ಪ, ಚಿಕ್ಕನಾಯಕನಹಳ್ಳಿಯಿಂದ ಆಯಾ ಬ್ಲಾಕ್ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಯಿತು.
ಅಂದು ಮಧ್ಯಾಹ್ನ 1 ಗಂಟೆಗೆ ಫ್ರೀಡಂ ಪಾರ್ಕಿನಿಂದ ಚಾಲುಕ್ಯ ಹೋಟೆಲ್ ಮುಂಭಾಗದ ಮೂಲಕ ರಾಜಭವನ ಮುತ್ತಿಗೆ ಹಾಕಲು ಮೆರವಣಿಗೆ ಮೂಲಕ ಹೊರಡುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ, ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಉಸ್ತುವಾರಿ ವಿ.ಆರ್. ಸುದರ್ಶನ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ಆರ್.ನಾರಾಯಣ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಚೌದ್ರಿ ರಂಗಪ್ಪ, ಹೊನ್ನಗಿರಿಗೌಡ ಸೇರಿದಂತೆ ವಿವಿಧ ತಾಲ್ಲೂಕುಗಳ ಬ್ಲಾಕ್ ಅಧ್ಯಕ್ಷರುಗಳು, ಮುಖಂಡರುಗಳು ಭಾಗವಹಿಸಿದ್ದರು.