ತುಮಕೂರು :
ಪಶುವೈದ್ಯರ ಕೆಲಸ ಇಂದು ದನ ಕರುಗಳಿಗೆ ಚಿಕಿತ್ಸೆ ನೀಡುವುದಕಷ್ಟೇ ಸಿಮೀತವಾಗಿಲ್ಲ.ಪ್ರಾಣಿಯಿಂದ ಮನುಷ್ಯನಿಗೆ ಬರಬಹುದಾದ ರೋಗಗಳನ್ನು ತಡೆಗಟ್ಟಿ, ಜನರ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಂಜುಳ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀಸಿದ್ದಾರ್ಥ ಎಂಬಿಎ ಸಭಾಂಗಣದಲ್ಲಿ ಕರ್ನಾಟಕ ಪಶು ವೈದ್ಯಕೀಯ ಸಂಘ, ತುಮಕೂರು ಜಿಲ್ಲಾ ಶಾಖೆ ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಜಾನುವಾರುಗಳು ಉದರ ಸಂಬಂಧಿ ರೋಗಗಳ ಪತ್ತೆ ಮತ್ತುಚಿಕಿತ್ಸೆ ಎಂಬ ವಿಷಯ ಕುರಿತ ತಾಂತ್ರಿಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಪ್ರಾಣಿಗಳಿಂದ ಮನುಷ್ಯನಿಗೆ ಹರಡಬಹುದಾದ ರೇಬಿಸಿ ಇನ್ನಿತರ ರೋಗಗಳು ಮಾನವ ಸಂಪನ್ಮೂಲವನ್ನು ಕಡಿಮೆ ಮಾಡದ ರೀತಿಯಲ್ಲಿ ಆಗಿಂದಾಗ್ಗೆ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಪಡೆದು, ಹೊಸ ರೋಗಗಳಿಗೆ ಸವಾಲಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕೃಷಿ ಸಂಕಷ್ಟದ ದಿನಗಳಲ್ಲಿ ಇರುವ ಇಂದು, ಹೈನುಗಾರಿಕೆ, ಪಶು ಸಂಗೋಪನಾ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದೆ. ಪಶುಸಂಗೋಪನೆಗೆ ಅಗತ್ಯವಿರುವ ಸವಲತ್ತು, ತಾಂತ್ರಿಕ ಮಾಹಿತಿ ಮತ್ತು ಸವಲತ್ತುಗಳನ್ನು ಸರಕಾರ ಪಶುವೈದ್ಯರ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ತಮ್ಮ ವೃತ್ತಿಯ ಜೊತೆಗೆ, ಹಲವು ಕೆಲಸಗಳನ್ನು ಪಶುವೈದ್ಯರು ನಡೆಸುತಿದ್ದಾರೆ ಎಂದು ಶ್ರೀಮತಿ ಮಂಜುಳ ನುಡಿದರು.
ಜಾನುವಾರುಗಳ ಉದರ ಸಂಬಂಧಿ ರೋಗಗಳ ಪತ್ತೆ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ಮಂಜು ನಾಥ್,ನಾವು ವಿದ್ಯಾರ್ಥಿಗಳಿದ್ದಾಗ ಪಠ್ಯದಿಂದ ಕಲಿತಿದ್ದನ್ನು,ಪಶುವೈದ್ಯರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಳವಡಿಸಿ ಕೊಂಡು ಉತ್ತಮ ವೈದ್ಯರಾಗಿ ರೂಪುಗೊಳ್ಳಲು ಅವಕಾಶವಿದೆ.ಇಲಾಖೆಯಿಂದ ನಡೆಯುವ ತಾಂತ್ರಿಕ ಕಾರ್ಯಾಗಾರ, ವಿಶೇಷ ಉಪನ್ಯಾಸಗಳ ಮೂಲಕ ಜ್ಞಾನವನ್ನು ಪಡೆದು,ಅದನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡರೆ, ನಮಗಿರುವ ಇತಿಮತಿಯಲ್ಲಿಯೇ ಜಾನುವಾರುಗಳಿಗೆ ಬರುವ ವಿವಿಧ ಉದರ ಸಂಬಂಧಿರೋಗಗಳನ್ನು ನಿಖರವಾಗಿ ಪತ್ತೆ ಹೆಚ್ಚಿ ಯಶಸ್ವಿ ಚಕಿತ್ಸೆ ನೀಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಸಂಗೋಪನೆ ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಜಿ.ಎಂ.ಕೋಟೇಶಪ್ಪ ಮಾತನಾಡಿ,ಜಾನುವಾರುಗಳ ಆರೋಗ್ಯ ಸೇವೆಯಲ್ಲಿ ತೊಡಗಿರುವ ಪಶುವೈದ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತಿದ್ದಾರೆ.ನಾವು ವಿದ್ಯಾರ್ಥಿಗಳಿದ್ದಾಗ ಪಠ್ಯದಲ್ಲಿ ಓದಿದ್ದ ಅಫ್ರಿಕಾದಲ್ಲಿ ಪ್ರಾಣಿಗಳಿಗೆ ಕಂಡು ಬರುತ್ತಿದ್ದ ಅನೇಕ ರೋಗಗಳು ಇಂದು ಭಾರತದ ಪ್ರಾಣಿಗಳಲ್ಲಿಯೂ ಕಂಡು ಬರುತ್ತಿವೆ.ಅಲ್ಲದೆ ಪ್ರಾಣಿಗಳಿಂದ ಮನುಷ್ಯನಿಗೆ ಹಲವಾರು ರೋಗಗಳು ಪ್ರಸರಣಗೊಳ್ಳುತ್ತಿವೆ.ಹಾಗಾಗಿ ಇಂದು ಪಶುವೈದ್ಯರು ಕೇವಲ ಪ್ರಾಣಿಗಳಿಗೆ ಬರುವ ರೋಗಗಳ ಬಗ್ಗೆ ಜ್ಞಾನ ಹೊಂದಿದ್ದರೆ ಸಾಲದು, ಎಲ್ಲಾ ರೀತಿಯ ಖಾಯಲೆಗಳ ಬಗ್ಗೆಯೂ ಪ್ರಾಥಮಿಕ ಜ್ಞಾನವನ್ನು ಹೊಂದಿರುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ಸಿ. ರುದ್ರಪ್ರಸಾದ್,ಕೋವಿಡ್‍ನಿಂದಾಗಿ ಕಳೆದ ಒಂದು ವರ್ಷದಿಂದ ನಾವು ತಾಂತ್ರಿಕ ಕಾರ್ಯಾಗಾರ ನಡೆಸಲು ಸಾಧ್ಯವಾಗಿ ರಲಿಲ್ಲ.ಇಂದು ಈ ಅವಕಾಶ ದೊರೆತಿದೆ. ಪಶುವೈದ್ಯರು ಪ್ರಾಣಿಗಳ ಉದರ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಕ್ಷೇತ್ರದಲ್ಲಿ ದಿನನಿತ್ಯ ಎದುರಿಸುತ್ತಿದ್ದೇವೆ.ಹಾಗಾಗಿ ಪಶುವೈದ್ಯರ ಪಾತ್ರ ಇತ್ತೀಚಿನ ದಿನಗಳಲ್ಲಿ ಬಹಳವಾಗಿದೆ.ಅಲ್ಲದೆ ಇತ್ತೀಚಿಗೆ ಸರಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಪಶುವೈದ್ಯರ ಮೇಲೆ ಅಪಾರ ಹೊರೆ ಬೀಳಲಿದೆ.ಸರಕಾರ ಪ್ರತಿ ತಾಲೂಕಿಗೆ ಎರಡು ಗೋ ಶಾಲೆಗಳನ್ನು ತೆರೆಯಲು ಹೊರಟಿದೆ.ಈ ಹಿಂದೆ ಬರ ಸಂದರ್ಭದಲ್ಲಿ ತೆರೆದ ಗೋಶಾಲೆ ಗಳಲ್ಲಿ ಕೆಲಸ ಮಾಡಿದ ಸುಮಾರು 32 ವೈದ್ಯರ ಮೇಲೆ ಹಾಕಿರುವ ಕೇಸ್‍ಗಳು ಇಂದಿಗೂ ಬಗೆಹರಿದಿಲ್ಲ. ಹೀಗಿರುವಾಗ ಹೊಸ ಗೋಶಾಲೆಗಳಿಂದ ಉದ್ಬವಿಸಬಹುದಾಗ ಸಮಸ್ಯೆ ಹಾಗೂ ಮಾನಸಿಕ ಒತ್ತಡ ಕುರಿತು ನಾವೆಲ್ಲರೂ ಆಲೋಚಿಸ ಬೇಕಾಗಿದೆ.ಹೊಸ ಸಮಸ್ಯೆ ಎದುರಿಸಲು ಸಿದ್ದರಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ.ನಾಗಭೂಷಣ್,ಉಪಾಧ್ಯಕ್ಷ ಡಾ.ದಿವಾಕರ್, ಡಾ.ಶಶಿಕಲ ಮತ್ತಿತರರು ಉಪಸ್ಥಿತರಿದ್ದರು.