ಮಂಡ್ಯ:
ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ವಿ.ಸಿ.ನಾಲೆಗೆ ಉರುಳಿ ಸುಮಾರು30 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.
ನಾಲೆಯಲ್ಲಿ ಬಸ್ ಸಂಪೂರ್ಣ ಮುಳುಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸದ್ಯಕ್ಕೆ 30 ಮೃತದೇಹಗಳನ್ನು ಹೊತೆಗೆಯಲಾಗಿದ್ದು, ಮಂಡ್ಯ, ಮೈಸೂರಿನಿಂದ ಆರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ನಿಯೋಜಿಸಲಾಗಿದೆ. ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ. 35ಕ್ಕೂ ಹೆಚ್ಚು ಮಂದಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪಾಂಡವಪುರದಿಂದ ಕನಗನಮರಡಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ನಾಲೆಗೆ ಉರುಳಿದೆ. ನಾಲೆಗೆ ತಡೆಗೋಡೆ ಇಲ್ಲದಿರುವುದೂ ಬಸ್ ಸುಲಭವಾಗಿ ನಾಲೆಗೆ ಉರುಳಲು ಕಾರಣ ಎನ್ನಲಾಗಿದೆ.
ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಮಂಡ್ಯ ಉಸ್ತುವಾರಿ ಸಚಿವ ಸಿ ಎಸ್ ಪುಟ್ಟರಾಜು ಅವರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ.
ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ :
ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲು, ಸಾಲು ಶವಗಳನ್ನು ಕಂಡು ಕಣ್ಣೀರು ಹಾಕಿದರು. ಏತನ್ಮಧ್ಯೆ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅಲ್ಲದೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು.
ಮಂಡ್ಯ ಆರ್.ಟಿ.ಓ. ಸಸ್ಪೆಂಡ್:
ಚಾಲಕನ ಅತೀಯಾದ ವೇಗ ಬಸ್ ನಾಲೆಗೆ ಉರಳಲು ಕಾರಣವಾಗಿದೆ. ಅಲ್ಲದೇ ಹಳೇ ಬಸ್ ಗೆ ಪರವಾನಿಗೆ ನೀಡಿದ್ದ ಮಂಡ್ಯ ಆರ್ ಟಿಒ ಅಧಿಕಾರಿಯನ್ನು ಅಮಾನತುಗೊಳಿಸಿ ಸಿಎಂ ಕುಮಾರಸ್ವಾಮಿ ಸ್ಥಳದಲ್ಲೇ ಆದೇಶ ಹೊರಡಿಸಿದ್ದಾರೆ.