ಗುಬ್ಬಿ:
ಸುಟ್ಟುಹೋದ ವಿದ್ಯುತ್ ಪರಿವರ್ತಕವನ್ನು ಬದಲಿಸಿಕೊಡುವಲ್ಲಿ ವಿಳಂಬ ಅನುಸರಿಸಿದ ಗುಬ್ಬಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬ್ಯಾಡಿಗೆರೆ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಬಗ್ಗೆ ಅಸಡ್ಡೆವಹಿಸಿದ ಬೆಸ್ಕಾಂ ಸಿಬ್ಬಂದಿಗಳ ವಿರುದ್ದ ಆಕ್ರೋಶ ಹೊರಹಾಕಿದ ಸ್ಥಳೀಯರು ಇಡೀ ಬೆಸ್ಕಾಂ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಸಬ ಹೋಬಳಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಿಗೆರೆ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ದಿಢೀರ್ ಸುಟ್ಟುಹೋದ ಟ್ರಾನ್ಸ್‍ಫಾರ್ಮರ್ ಇಡೀ ಗ್ರಾಮ ಕಗ್ಗತ್ತಲಲ್ಲಿ ಇರುವಂತಾಯಿತು. ಈ ಬಗ್ಗೆ ಕೂಡಲೇ ಅಧಿಕಾರಿಗಳಿಗೆ ತಿಳಿಸಲಾಯಿತು. ದುರಸ್ಥಿ ಮಾಡುವುದಾಗಿ ಹೇಳಿ ದಿನ ಕಳೆದಂತೆ ಒಂದಲ್ಲಾ ಒಂದು ಸಬೂಬು ಹೇಳಿಕೊಂಡು 15 ದಿನಗಳಾದರೂ ಟಿಸಿ ಬದಲಿಸಲಿಲ್ಲ. 200 ಕ್ಕೂ ಅಧಿಕ ಮನೆಗಳಿರುವ ಈ ಗ್ರಾಮಕ್ಕೆ ವಿದ್ಯುತ್ ಕುಡಿಯುವ ನೀರಿಗೆ ಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಗ್ರಾಮಗಳ ಮನೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ವಿದ್ಯುತ್ ಪಡೆದುಕೊಳ್ಳಲು ಹರಸಾಹಸ ಮಾಡಲಾಯಿತು. ಆದರೂ ಕುಡಿಯುವ ನೀರಿಗೆ ಇರುವ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಅತ್ಯಗತ್ಯವಾಗಿದೆ. ಈಗಾಗಲೇ ಬೇಸಿಗೆಯ ಬಿಸಲು ಜನರನ್ನು ಕಂಗಾಲು ಮಾಡಿದೆ. ಕುಡಿಯಲು ನೀರು ಒದಗಿಸುವ ಬೋರ್‍ಗೆ ವಿದ್ಯುತ್ ಒದಗಿಸಲು ಸಾರ್ವಜನಿಕರ ಮನವಿಗೆ ಪುರಸ್ಕರಿಸಿದ ಬೆಸ್ಕಾಂ ಇಂಜಿನಿಯರ್ ಅನಿಲ್ ಮೊಬೈಲ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಬೇರೆ ಸಿಬ್ಬಂದಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಜೆ.ಎಂ.ನರಸಿಂಹಮೂರ್ತಿ ಕಿಡಿಕಾರಿದರು.
200 ಮನೆಗಳಿಗೆ ನೀರು ಒದಗಿಸುವ ಬೋರ್ ಚಾಲನೆಗೆ ಪರಿವರ್ತಕ ಅಗತ್ಯವಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳ ಬೇಜವಾಬ್ದಾರಿತನ ಕರ್ತವ್ಯ ಲೋಪವೂ ಅಥವಾ ಮತ್ತೇನನ್ನೂ ನಿರೀಕ್ಷಿಸಿದೆಯೋ ತಿಳಿಯತ್ತಿಲ್ಲ ಎಂದು ದೂರುವ ಗ್ರಾಮಸ್ಥರು 24 ಗಂಟೆಯಲ್ಲಿ ಪರಿವರ್ತಕ ಬದಲಿಸುವ ಮಾತುಗಳಾಡುವ ಸರ್ಕಾರ ಮೂಲಭೂತ ಕುಡಿಯುವ ನೀರಿಗೆ ವಿದ್ಯುತ್ ನೀಡದಿರುವ ಬಗ್ಗೆ ಗಮನ ಹರಿಸಬೇಕಿದೆ. ತಾಲ್ಲೂಕು ಆಡಳಿತ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಸೂಕ್ತ ಕ್ರಮವಹಿಸಬೇಕಿದೆ. ತಾಲ್ಲೂಕು ಆಡಳಿತ ಇತ್ತ ಗಮನಹರಿಸಿ ಕುಡಿಯುವ ನೀರಿಗೆ ಮೊದಲ ಆದ್ಯತೆಯಲ್ಲಿ ಕ್ರಮವಹಿಸಿ ಕೂಡಲೇ ಪರಿವರ್ತಕ ಬದಲಿಸಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮೂಲಕ ಹಕ್ಕು ಪ್ರತಿಪಾದಿಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.