ಮಧುಗಿರಿ:
ತಾಲೂಕಿನ ಕೆಲ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಿರುವುದು ಈಗಾಗಲೇ ವರದಿಯಾಗಿದ್ದು, ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಇದೇ ಹಾದಿಯಲ್ಲಿ ಸಾಗುತ್ತಿದ್ದು, ವಿನೂತನ ಮಾದರಿಯ ಹೈಟೆಕ್ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ.
ಹೈಟೆಕ್ ಅಂಗನವಾಡಿ ಕೇಂದ್ರ :
ಪಟ್ಟಣದ ಪುರಸಭಾ ವ್ಯಾಪ್ತಿಯ ಬಹಳಷ್ಟು ಬಡಜನರಿಂದ ಕೂಡಿರುವ ಮಂಡರ ಕಾಲೋನಿಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸುಮಾರು 16.50 ಲಕ್ಷ ವೆಚ್ಚದಲ್ಲಿ ಹೈಟೆಕ್ ಅಂಗನವಾಡಿ ಕೇಂದ್ರವನ್ನು ನಿರ್ಮಿಸಿದ್ದು, ಪಟ್ಟಣದ ಮೊದಲ ಹೈಟೆಕ್ ಅಂಗನವಾಡಿ ಕೇಂದ್ರವಾಗಿದೆ.
ಪಟ್ಟಣದಲ್ಲಿ ಸುಮಾರು 25 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಬಹುತೇಕ ಅಂಗನವಾಡಿಗಳು ಬಾಡಿಗೆ ಕೊಠಡಿಗಳಲ್ಲಿ ನಡೆಯುತ್ತಿವೆ. ಈಗ ಮಂಡರ ಕಾಲೋನಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಹೈಟೆಕ್ ಮಾದರಿಯಲ್ಲಿ ಬಹಳ ಸುಂದರವಾಗಿ ನಿರ್ಮಿಸಿದ್ದು, ಸ್ವಂತ ಕಟ್ಟಡವನ್ನು ಹೊಂದಿರುವ ಈ ಕೇಂದ್ರದಲ್ಲಿ ವಿಶಾಲವಾದ ಹಾಲ್, ಅಡುಗೆ ಕೋಣೆ, ಸ್ಟೋರ್ ರೂಂ ಮತ್ತು ಕಾಂಪೌಂಡ್ ನಿರ್ಮಿಸಿರುವ ವಿಶಾಲವಾದ ಆಟದ ಮೈದಾನವನ್ನು ಒಳಗೊಂಡಿದೆ.
ಬಣ್ಣಗಳ ಚಿತ್ತಾರ :
ಅಂಗನವಾಡಿ ಕೇಂದ್ರದ ಗೋಡೆಗಳನ್ನು ವಿವಿಧ ಬಣ್ಣಗಳ ಚಿತ್ತಾರದಿಂದ ಅಲಂಕರಿಸಿದ್ದು, ವಿದ್ಯಾ ದೇವತೆ ವಿನಾಯಕ ಪೆನ್ಸಿಲ್ ಹಿಡಿದು ನಿಂತಿರುವ ಕಣ್ಮನ ಸೇಳೆಯುವ ಮಕ್ಕಳ ಕಾರ್ಟೂನ್ ಸೇರಿದಂತೆ ವಿವಿಧ ಚಿತ್ತಾರಗಳು, ಇದಲ್ಲದೇ ಗೋಡೆಗಳಿಗೆ ಅಂಕಿಗಳು, ವಾರಗಳು, ಹಣ್ಣು, ತರಕಾರಿಗಳು, ಕಾಡು ಪ್ರಾಣಿಗಳ ಚಿತ್ರಗಳು, ತಿಂಗಳುಗಳು, ಸಾಕು ಪ್ರಾಣಿಗಳ ಚಿತ್ರಗಳು, ಆಂಗ್ಲ ಭಾಷೆಯ ಕಲಿಕೆ ಸೇರಿದಂತೆ, ವರ್ಣ ಮಾಲೆಯ ಪದ ಪುಂಜಗಳನ್ನೇ ಅರಳಿಸಿದ್ದು, ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುವಂತೆ ರಚಿಸಲಾಗಿದ್ದು, ಮಕ್ಕಳ ಕಲಿಕೆಗೆ ಹೇಳಿ ಮಾಡಿಸಿದಂತಿದೆ.