ತುಮಕೂರು:
ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅವರನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬುಧವಾರ ರಾತ್ರಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಫಲತಾಂಬೂಲ, ನೆನಪಿನ ಕಾಣಿಕೆ ನೀಡುವ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಜಿ.ಪಂ. ನೂತನ ಸಿಇಓ ಜಿ.ಎಂ. ಗಂಗಾಧರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲೆಯಲ್ಲಿ ಎರಡೂವರೆ ವರ್ಷಗಳ ಕಾಲ ನಾನು ಮಾಡಿರುವ ಕೆಲಸ ನನಗೆ ಆತ್ಮತೃಪ್ತಿ ತಂದಿದೆ. ಡಿಸಿ, ಎಸ್ಪಿ ಹಾಗೂ ಸಿಇಒ ಜಿಲ್ಲೆಯ ಅಡಿಪಾಯ. ಇದು ಜಿಲ್ಲೆಯಲ್ಲಿ ಗಟ್ಟಿಯಾಗಿದ್ದರೆ ಎಂತಹ ಕೆಲಸವನ್ನು ಮಾಡಬಹುದು. ಇವರ ಮಧ್ಯೆ ಸಮನ್ವಯತೆ ಇರಬೇಕು. ಈ ಸಮನ್ವಯ, ಟೀಮ್ ವರ್ಕ್ ಇದ್ದುದರಿಂದ ನನಗೆ ಇವತ್ತು ಮೆಚ್ಚುಗೆ ಸಿಕ್ಕಿದೆ ಎಂದರು.
ಸಾಮಾನ್ಯ ಮನುಷ್ಯನ ಜೀವನದಲ್ಲಿ ಬದಲಾವಣೆ ತರುವ ಶಕ್ತಿ ಕಂದಾಯ ಇಲಾಖೆಗೆ ಇದೆ. ನಿಮ್ಮ ಜವಾಬ್ದಾರಿ ಅತಿಹೆಚ್ಚು ಇದೆ ಎಂದು ತಹಶೀಲ್ದಾರ್‍ಗಳಿಗೆ ಸಲಹೆ ಮಾಡಿದ ಅವರು, ವೃದ್ಧರು, ಅಂಗವಿಕಲರು, ಹಿರಿಯ ನಾಗರಿಕರನ್ನು ಪಿಂಚಣಿಗಾಗಿ ಕಚೇರಿಗೆ ಅಲೆಸಬೇಡಿ. ಅವರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ. ಜತೆಗೆ ರೈತರನ್ನು ಸಹ ಕಚೇರಿಗಳಿಗೆ ಓಡಾಡಿಸದೆ ಅವರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಿ ಎಂದು ಹೇಳಿದರು.
ನೂತನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಹೊಗಳುವುದರಿಂದ ನಮಗೆ ವೈಯಕ್ತಿಕ ಲಾಭವಿಲ್ಲ. ರಾಜ್ಯಕ್ಕೆ ರಾಕೇಶ್‍ಕುಮಾರ್ ಅವರಂತಹ ಒಳ್ಳೆಯ ಅಧಿಕಾರಿಯನ್ನು ಕೊಟ್ಟಿರುವ ಸಂತಸ ಇದೆ. ರೈತರ ಬಗ್ಗೆ ಕಾಳಜಿ ಇದೆ. ರಾಕೇಶ್‍ಕುಮಾರ್ ಅವರು ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ನಮ್ಮ ಜಿಲ್ಲೆ ಹಾಗೂ ನಮ್ಮ ನಾಡು ಕಂಡ ಅಪರೂಪದ ಅಧಿಕಾರಿಗಳಲ್ಲಿ ಇವರು ಒಬ್ಬರು. ಮುಂದಿನ ದಿನಗಳಲ್ಲಿ ಇನ್ನು ಉನ್ನತ ಮಟ್ಟದ ಸ್ಥಾನಗಳನ್ನು ಅಲಂಕರಿಸಲಿ ಎಂದು ಆಶಿಸಿದರು.
ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಕೆ. ರಾಕೇಶ್‍ಕುಮಾರ್ ಅವರು ಯಾವುದೇ ಹುದ್ದೆಗೆ ವರ್ಗಾವಣೆಗೊಂಡರೂ ಉತ್ತಮವಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಅಂತಿಮ ವಿದಾಯದ ಕಾರ್ಯಕ್ರಮದ ನಿರ್ವಹಣೆ, ಲೋಕಸಭಾ ಚುನಾವಣೆಯ ಕಾರ್ಯವೈಖರಿಗೆ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಜಿ.ಪಂ. ಸಿಇಓ ಗಂಗಾಧರಸ್ವಾಮಿ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.