ಗುಬ್ಬಿ:
ಬಡ ಮತ್ತು ಮಧ್ಯಮವರ್ಗ ಜನರ ಜೀವನದಲ್ಲಿ ಆಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ದಿನಕೊಮ್ಮೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುತ್ತಿದೆ. ಇದರ ಅಡ್ಡಪರಿಣಾಮ ಎಲ್ಲಾ ಕ್ಷೇತ್ರಕ್ಕೂ ಹೊರೆ ಎನಿಸಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.
ತಾಲ್ಲೂಕಿನ ಕೆ.ಜಿ.ಟೆಂಪಲ್‍ನಲ್ಲಿ ಆರಂಭವಾದ ಬುದ್ದ ಬಸವ ಅಂಬೇಡ್ಕರ್ ಫ್ಯೂಯಲ್ ಸ್ಟೇಷನ್ ಪೆಟ್ರೋಲ್ ಬಂಕನ್ನು ಉದ್ಘಾಟಿಸಿದ ಅವರು ಅಗತ್ಯವಸ್ತುಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡುತ್ತಿರುವ ಬಿಜೆಪಿ ಸರ್ಕಾರ ಆರ್ಥಿಕ ಸುಧಾರಣೆ ಹೆಸರಿನಲ್ಲಿ ಕೋವಿಡ್ ಸಂಕಷ್ಟದ ನಡುವೆ ಶ್ರೀಸಾಮಾನ್ಯರಿಗೆ ಗಾಯದ ಮೇಲೆ ಬರೆ ಹಾಕುತ್ತಿದೆ ಎಂದರು.
ಪ್ರತಿ ಬಡವನೂ ದ್ವಿಚಕ್ರವಾಹನವನ್ನು ಅವಲಂಬಿಸಿ ಕೂಲಿ ನಡೆಸುತ್ತಾನೆ. ಅನಿವಾರ್ಯವಾಗಿ ಬದುಕಿಗೆ ಹೊಂದಿಕೊಂಡ ವಾಹನಗಳಿಗೆ ತೈಲ ಒದಗಿಸುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಬಜೆಟ್ ನಂತರದಲ್ಲಿ ನಿತ್ಯ ತೈಲ ಬೆಲೆ ಹೆಚ್ಚಿಸುತ್ತಿರುವ ಹಿನ್ನಲೆ ತಿಳಿಯುತ್ತಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆ ಎನ್ನುತ್ತಲೇ ತೈಲದ ಮೇಲಿನ ತೆರಿಗೆ ಹೆಚ್ಚಿಸಿ ಜನರಿಂದ ವಸೂಲಿಗೆ ನಿಂತಿರುವುದು ಎಷ್ಟರಮಟ್ಟಿಗೆ ಸರಿ ಎಂದ ಅವರು ಈ ಹಿಂದೆ 20 ಲಕ್ಷ ಕೋಟಿ ರೂಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಸರ್ಕಾರ ಆ ಹಣವನ್ನು ಎತ್ತ ಸಾಗಿಸಿದೆ. ಇದರ ಅನುಷ್ಠಾನದ ವಿವರ ಕೊಂಚವೂ ಸಿಕ್ಕಿಲ್ಲ ಎಂದರು.
ಗ್ರಾಮೀಣ ಭಾಗಕ್ಕೆ ಪೆಟ್ರೋಲ್ ಬಂಕ್ ಅವಶ್ಯವಿದೆ. ಇದನ್ನರಿತ ಗ್ರಾಮೀಣ ಭಾಗದ ಯುವಕರು ಬಂಕ್ ಅವಶ್ಯವಿರುವ ಸ್ಥಳದಲ್ಲಿ ಆರಂಭಿಸಿದ್ದಾರೆ. ಸಿ.ಎಸ್.ಪುರ ರಸ್ತೆ ಮಧ್ಯಭಾಗಕ್ಕೆ ಈ ಬಂಕ್ ನಿರ್ಮಿಸಿ ಬುದ್ದ ಬಸವ ಅಂಬೇಡ್ಕರ್ ಅವರ ಹೆಸರಿನ ಮೂಲಕ ಸೇವೆ ನಡೆಸಿರುವುದು ಸ್ವಾಗತಾರ್ಹ ಎಂದ ಅವರು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಬೆಂಬಲಿಗರು ತಯಾರಿ ನಡೆಸಿದ್ದಾರೆ. ಮೀಸಲಾತಿ ಅನ್ವಯ ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆಸಿ ಚುನಾವಣೆ ನಡೆಸಲಾಗುವುದು ಎಂದ ಅವರು ಅಭಿವೃದ್ದಿ ಕೆಲಸಗಳ ಬಗ್ಗೆ ಈ ಬಾರಿಯ ಬಜೆಟ್‍ನಲ್ಲಿ ಪ್ರಸ್ತಾಪ ನಡೆಸಲು ಪಟ್ಟಿ ತಯಾರಿಸಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಕಳ್ಳೀಪಾಳ್ಯ ಲೋಕೇಶ್, ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಬಿಬಿಎಂಪಿ ಇಂಜಿನಿಯರ್ ಕೃಷ್ಣಕಾಂತ್, ಮುಖಂಡರಾದ ವೆಂಕಟೇಶಯ್ಯ, ಅಶೋಕ್, ಪಾಳ್ಯ ಬಸವರಾಜು, ಪಣಗಾರ್ ವೆಂಕಟೇಶ್, ಸ್ಟೇಷನ್ ಮಾಲೀಕ ರಘುನಂದನ್ ಇತರರು ಇದ್ದರು.