ತುಮಕೂರು:

      ಗ್ರಾಮೀಣ ಪ್ರದೇಶಗಳಿಗೆ ತಾಲ್ಲೂಕು ಆರೋಗ್ಯ ಕೇಂದ್ರಗಳು ಹಾಗೂ ಅಸ್ಪತ್ರೆಗಳು ದೇವಾಲಯಗಳಿಂತಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳು, ಬಡವರು, ದೇವರಂತೆ ಕಾಣಬೇಕು ಎಂದು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವರಿ ಸಚಿವ, ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

      ಜಿಲ್ಲೆಯ ಶಿರಾ ಪಟ್ಟಣದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿರಾ ತಾಲೂಕಿಗೆ ಹಿಂದೆಯೇ ಈ ವ್ಯವಸ್ಥಿತ ಆಸ್ಪತ್ರೆ ಅವಶ್ಯಕ ಇತ್ತು ಇಂದು ತುಮಕೂರು ಜಿಲ್ಲೆಯ ವೈದ್ಯಕೀಯ ಸೇವೆಗಳಲ್ಲಿ ಶಿರಾ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದು ಮೈಲಿಗಲ್ಲು ಸಾಧಿಸಿದೆ ಸ್ಥಳೀಯವಾಗಿ ಅನೇಕ ಹೆಣ್ಣು ಮಕ್ಕಳ ಶುಶ್ರೂ‍ಷೆ ಮತ್ತು ಹೆರಿಗೆಗೆ ಸಹಾಯಕವಾಗುತ್ತದೆ ಎಂದರು.

      ಕಾಲಕಾಲಕ್ಕೆ ತಪಾಸಣೆ, ಉತ್ತಮ ಚಿಕಿತ್ಸೆಗಳು ಸ್ಥಳೀಯವಾಗಿ ದೊರೆತು ಆಸ್ಪತ್ರೆಗಳಲ್ಲಿ ಹೆರಿಗೆಗೆ ನೊಂದಣಿಯಾದ ಶೇಕಡ 80%ರಷ್ಟು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆಗಳಾಗಿ ಜಿಲ್ಲಾ ಮಟ್ಟದ ಆಸ್ಪತ್ರೆಗೆ ಇರುವ ಒತ್ತಡವನ್ನ ಕಡಿಮೆ ಮಾಡಿ ತಾಲ್ಲೂಕು ಅಸ್ಪತ್ರೆಗಳು ಉನ್ನತ ಮಟ್ಟಕ್ಕೆ ಹೇರಬೇಕು ಎಂದರು.

ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದ ಕಾಲದಲ್ಲಿ ಸಿಬ್ಬಂದಿ ಕೊರತೆ ಸ್ಥಿತಿ ಇಲ್ಲ ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯರು ಇದ್ದಾರೆ ಅನುಕೂಲಗಳು ಇವೆ ಕೋವಿಡ್-19 ನಮಗೆ ಕಷ್ಟವಾಗಿದರೂ ಆಸ್ಪತ್ರೆಗಳ ಅಭಿವೃದ್ಧಿ ಅಗಿದೆ ಸ್ಥಳೀಯ ವಾಗಿ ಶುಶ್ರೂಷೆ ,ಹೆರಿಗೆ ಸಿಗುತ್ತಿದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯದ ಆರೋಗ್ಯ ಕೇಂದ್ರಗಳಿಂದ ಸಾಮಾನ್ಯ ಜನರ ಮನೆ ಬಾಗಿಲಿಗೆ ಇಂದು ಆರೋಗ್ಯದ ಚಿಕಿತ್ಸೆಗಳು ನೀಡುವಂತೆ ಅಗಬೇಕಾಗಿದೆ ಎಂದು ಅವರು ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಸಮಯ ಬಹಳ ಮುಖ್ಯ ಎರಡು ನಿಮಿಷದಲ್ಲಿ ಒಂದು ಪ್ರಾಣ ಉಳಿಯಬಹುದು ಒಂದು ಪ್ರಾಣ ಹೋಗಲುಬಹುದು ತ್ವರಿತವಾಗಿ ಇರುವ ಚಿಕಿತ್ಸೆ ಎಲ್ಲಾ ವಲಯಗಳಲ್ಲಿ ಹೆಚ್ಚಾಗಿ ಸಿಗಬೇಕು ಅನ್ನುವ ಉದ್ದೇಶದಿಂದ ಆರೋಗ್ಯ ಕ್ಷೇತ್ರವನ್ನ ವಿಸ್ತಾರ ಮಾಡಲಾಗಿದೆ. ಅದ್ದರಿಂದ ಶಿರಾ ತಾಲೂಕಿನ ಗ್ರಾಮೀಣ ಪ್ರದೇಶದ ಬಡ ಜನರಿಗೆ ಇದರ ಉಪಯೋಗವಾಗಬೇಕು ಸುಖ ಸುಮ್ಮನೆ ಹೆರಿಗೆ ಸಮಯದಲ್ಲಿ ಚೀಟಿ ಬರೆದು ಜಿಲ್ಲಾ ಆಸ್ಪತ್ರೆಗೆ ರವಾನಿಸುವುದು ಬೇಡ, ತಾಲ್ಲೂಕು ಆಸ್ಪತ್ರೆಗಳಲ್ಲಿ ಶೇಕಡ 30% ರಷ್ಟು ನೊಂದಣಿಯಾದ ಹೆರಿಗೆಗಳು ಆಗುತ್ತಿಲ್ಲ. ಜಿಲ್ಲಾ ಆಸ್ಪತ್ರೆಗಿಂತ ಹೆಚ್ಚಿನ ಸೌಲಭ್ಯಗಳು ಇಲ್ಲಿ ಇದ್ದರೂ ಬೇರೊಂದು ಕಡೆಗೆ ಕಳುಸುತ್ತಿರುವುದು ನಮಗೂ ಶೋಭೆ ತರುವುದಿಲ್ಲ ಇದನ್ನು ವೈದ್ಯಾಧಿಕಾರಿಗಳು ಗಮನಿಸಬೇಕಾಗಿದೆ ಎಂದು ಅವರು ಎಚ್ಚರಿಸಿದರು.

      ಜಿಲ್ಲೆಯಲ್ಲಿ ಕೋವಿಡ್-19 ಶುರುವಾಗಿದ್ದು ಇದೇ ಶಿರಾ ತಾಲ್ಲೂಕಿನಿಂದ ಈಗ ದೇಶದ ನಾನಾ ಭಾಗಗಳಲ್ಲಿ ಎರಡನೇ ಹಂತದ ಕೋವಿಡ್ ಕಾಟ ಶುರುವಾಗಿದ್ದು ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಕೋವಿಡ್ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತರೆಯರು ಶ್ರಮವಹಿಸಿ ನಿಯಂತ್ರಣ ಮಾಡಿದ್ದಿರಿ ಅದೇ ರೀತಿ ಎರಡನೇ ಹಂತದ ಕೋವಿಡ್ ಬರುವ ಮುಂಚೆ ನೀವು ಎಲ್ಲರಿಗೂ ಅರಿವು ಮೂಡಿಸಿ ಜಾಗೃತಗೊಳಿಸಬೇಕು ನಿಮ್ಮ ಈ ಕಾರ್ಯಕ್ಕೆ ನಾನು ಅಭಾರಿಯಾಗಿದ್ದೇನೆ ಅದಕ್ಕೆ ಅಭಿನಂದಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಶಿರಾ ಪಟ್ಟಣ ತುಮಕೂರು ಜಿಲ್ಲೆಗೆ ವಾಣಿಜ್ಯ ನಗರವಿದ್ದಂತೆ ರಾಜ್ಯದಲ್ಲಿ ತುಮಕೂರು ಜಿಲ್ಲೆ ದೊಡ್ಡ ಜಿಲ್ಲೆ ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ ಅಭಿವೃದ್ಧಿ ಗೆ ಯೋಗ್ಯ ವಾಗಿದೆ. ಶಿರಾ ಪಟ್ಟಣ ಸೈನಿಕರ ತಾಣವಾಗಿತ್ತು ರಾಜಕೀಯ ನಿರ್ಣಾಯಕ ಪ್ರದೇಶವಾಗಿದೆ ಇಂತಹ ಚರಿತ್ರೆಯುಳ್ಳ ಪುಣ್ಯ ನಾಡಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿರುವುದು ಭಾಗ್ಯ ಇದಕ್ಕೆ ಸುಮಾರು 25 ಕೋಟಿ. ಅನುದಾನ ನೀಡಿದೆ ಎಂದರು.

      ರಾಜ್ಯದ ಹಲವಾರು ಕಡೆ ವಸತಿ ಸೌಲಭ್ಯವಿಲ್ಲದಿರುವುದರಿಂದ ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸವಿರುವುದಿಲ್ಲ. ಇದರಿಂದ ವೈದ್ಯರ ಸೇವೆ ಸಾರ್ವಜನಿಕರಿಗೆ ಸಕಾಲದಲ್ಲಿ ಸಮರ್ಪಕವಾಗಿ ತಲಪುವುದಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೊಂದಿಗೆ ವೈದ್ಯರಿಗಾಗಿ 10, ಶುಶ್ರೂಕರಿಗಾಗಿ 12, ಗ್ರ್ರೂಪ್ ಡಿ ನೌಕರರಿಗಾಗಿ 8 ವಸತಿ ಸೇರಿದಂತೆ ಒಟ್ಟು 30 ವಸತಿಗಳನ್ನು ನಿರ್ಮಿಸಿ ಇಂದು ಉದ್ಘಾಟನೆ ಮಾಡಲಾಗಿದೆ. ಆಸ್ಪತ್ರೆ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ವೈದ್ಯಕೀಯ/ಆರೋಗ್ಯ
ಸಿಬ್ಬಂದಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕರುಣೆ, ಅನುಕಂಪದೊಂದಿಗೆ ಸೇವೆ ಸಲ್ಲಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಗಳು ಬಹಳ ಹೆಚ್ಚಿಗೆ ಇರುತ್ತವೆ. ಬಡವರು ಉತ್ತಮ ಚಿಕಿತ್ಸೆಯನ್ನು ಪಡೆಯಬೇಕಾದರೆ ಸರ್ಕಾರಿ ಆಸ್ಪತ್ರೆಗಳೇ ಅವರಿಗೆ ಆಶ್ರಯ.
ರೋಗಿಗಳನ್ನು ಕುಟುಂಬದ ಸದಸ್ಯರಂತೆ ಕಾಣಬೇಕು ಎಂದು ಅವರು ತಿಳಿಸಿದರು.

     ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು 24*7 ಹಾಗೂ 365 ದಿನಗಳ ಕಾಲವೂ ಸೇವೆ ಒದಗಿಸಬೇಕು. ಸಮುದಾಯ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ತಾಲ್ಲೂಕು ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಚಿಂತನೆ ಇದೆ. ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವ 9 ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ (ಪಿ.ಪಿ.) ಸಹಭಾಗಿತ್ವದಲ್ಲಿ ಹೊಸ ವೈದ್ಯಕೀಯ ಕಾಲೇಜು ಹಾಗೂ ಪ್ರಾಥಮಿಕ, ದ್ವಿತೀಯ, ತೃತೀಯ ಚಿಕಿತ್ಸಾ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

      ಜಿಲ್ಲೆಯಲ್ಲಿ 2 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಕ್ಯಾನ್ಸರ್ ಚಿಕಿತ್ಸೆಗಾಗಿ ದೂರದ ಬೀದರ್, ಬೆಳಗಾಂನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಸುಮಾರು 35 ಕೋಟಿ ರೂ. ವೆಚ್ಚಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಹೃದ್ರೋಗ, ಮೂತ್ರಪಿಂಡ ರೋಗಗಳಿಗೆ ಉತ್ತಮ ಚಿಕಿತ್ಸೆ ನೀಡಲು ಕನಿಷ್ಟ ಬೆಳಗಾಂ, ಕಲಬರ್ಗಿ ಸೇರಿದಂತೆ ಪ್ರಾದೇಶಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸಲಾಗಿದೆ.

        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿರಾ ಶಾಸಕ ಸಿ.ಎಂ. ರಾಜೇಶ್ ಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಚಿತ್ರದುರ್ಗ ಲೋಕಸಭಾ ಸದಸ್ಯರಾದ ಎ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ತೆಂಗುನಾರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಆರ್.ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಸಿಇಓ ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ , ಡಾ.ಸನತ್‍ಕುಮಾರ್, ಡಾ.ಕೇಶವರಾಜು, ಡಾ. ವೀರಭದ್ರಯ್ಯ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ್, ಶಿರಾ ತಹಶೀಲ್ದಾರ್ ಮಮತ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತಿ ಇದ್ದರು.

(Visited 10 times, 1 visits today)