ಬೆಂಗಳೂರು:
ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರನಟ ಅಂಬರೀಶ್(66), ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಂಜೆ ಮನೆಯಲ್ಲಿ ಕುಸಿದು ಬಿದ್ದ ಅಂಬರೀಶ್ ರನ್ನು ಕುಟುಂಬದ ಸದಸ್ಯರು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಾಗಲೇ ಉಸಿರಾಟದ ಸಮಸ್ಯೆ ಮತ್ತು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅಂಬರೀಶ್ ಅವರಿಗೆ ವಿಕ್ರಂ ಆಸ್ಪತ್ರೆಯ ಡಾ.ಸತೀಶ್ ಅವರ ತಂಡ ಚಿಕಿತ್ಸೆ ನೀಡಲು ಸತತ ಪ್ರಯತ್ನ ನಡೆಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂಬರೀಶ್ ರಾತ್ರಿ 9.30ರ ಸುಮಾರಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಚಿವ ಜಾರ್ಜ್, ಮಂಡ್ಯದ ಸಂಸದ ಎಲ್. ಆರ್.ಶಿವರಾಮೇಗೌಡ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಮುನಿರತ್ನ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮಂಡ್ಯದ ಜನರ ಕಣ್ಮಣಿಯಾಗಿ ಮಂಡ್ಯದ ಗಂಡು ಎಂದೇ ಹೆಸರಾಗಿದ್ದರು. ಅಂಬರೀಶ್ ನಿಧನದ ಸುದ್ದಿ ತಿಳಿದು ಆಸ್ಪತ್ರೆಗೆ ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ನಿಧನದ ಸುದ್ದಿಯಿಂದ ದಿಗ್ಭ್ರಾಂತರಾಗಿರುವ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿ ಬರುತ್ತಿರುವುದರಿಂದ ನಗರದ ವಿಕ್ರಂ ಆಸ್ಪತ್ರೆಯ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.