ತುಮಕೂರು :
ಸಮಾಜದಲ್ಲಿ ಅಪರಾಧ ಪ್ರಕರಣಗಳ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಸ್ತು, ಸಂಯಮ, ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿರುವ ಪೆÇಲೀಸ್ ಇಲಾಖೆಯನ್ನು ಸದಾ ಜನಸಾಮಾನ್ಯರು ಗಮನಿಸುತ್ತಿರುತ್ತಾರೆ. ಹಾಗಾಗಿ ಪೊಲೀಸರು ಪ್ರತಿ ಕ್ಷಣವೂ ಬಹಳ ಎಚ್ಚರಿಕೆಯಿಂದಲೇ ಕಾರ್ಯನಿರ್ವಹಿಸಬೇಕಾಗಿದೆ. ಹೀಗಾಗಿ ಪ್ರತಿ ಕ್ಷಣವೂ ಒತ್ತಡ ಎಂಬುದು ಬೆನ್ನೇರಿರುತ್ತದೆ. ಈ ಎಲ್ಲ ಒತ್ತಡಗಳಿಂದ ಮುಕ್ತರಾಗಲು ಕ್ರೀಡಾಕೂಟಗಳು ಅನಿವಾರ್ಯ ಎಂದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಬಲೂನ್ ಹಾಗೂ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ ಮನುಷ್ಯನ ದೈಹಿಕ ಸದೃಢತೆ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಕ್ರೀಡೆ ಮತ್ತು ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಲು ಕ್ರೀಡೆಗಳು ಅತ್ಯವಶ್ಯ ಎಂದರು.
ಕ್ರೀಡಾಕೂಟಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬರು ಕ್ರೀಡಾ ಮನೋಭಾವದಿಂದ ಕ್ರೀಡೆಗಳನ್ನು ಆಡಬೇಕು. ಕ್ರೀಡಾಪಟುಗಳು ಕ್ರೀಡೆಗಳನ್ನು ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಬದಲಾಗಿ ವೈಯಕ್ತಿಕವಾಗಿ ಯಾರು ಇದನ್ನು ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಕ್ರೀಡಾಕೂಟಗಳಲ್ಲಿ ಕ್ರೀಡೆಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವಂತೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅದೇ ಮನೋಭಾವದಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಯಾವುದೇ ವ್ಯಕ್ತಿಯ ಪರ, ಪಕ್ಷದ ಪರ ಕೆಲಸ ಮಾಡಬಾರದು. ನ್ಯಾಯದ ಪರ, ನೊಂದವರ ಪರ ಕಾರ್ಯನಿರ್ವಹಿಸಬೇಕು ಎಂದರು.
ಕ್ರೀಡಾಕೂಟಗಳು ಪೊಲೀಸ್ ಸಿಬ್ಬಂದಿಗಳ ಕುಟುಂಬಗಳ ಬಾಂಧವ್ಯ ಬೆಳೆಸಲು ಸಹ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಿ ಒತ್ತಡದಿಂದ ಮುಕ್ತರಾಗಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಇದೇ ಮೊದಲ ಬಾಲಿಗೆ ಗುಂಡು ಎಸೆತ ಕ್ರೀಡಾಕೂಟಕ್ಕೂ ಚಾಲನೆ ನೀಡಿ ಪೆÇಲೀಸ್ ಸಿಬ್ಬಂದಿಗಳಲ್ಲಿ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಉಪವಿಭಾಗಗಳ ಡಿವೈಎಸ್ಪಿಗಳು, ಸರ್ಕಲ್ ಇನ್ಸ್‍ಪೆಕ್ಟರ್‍ಗಳು, ಸಬ್‍ಇನ್ಸ್‍ಪೆಕ್ಟರ್‍ಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಡಿಷನಲ್ ಎಸ್ಪಿ ಉದೇಶ್ ವಂದಿಸಿದರು.