ಕೊಡಿಗೇನಹಳ್ಳಿ :
ಪೂರ್ವಜರ ಕಾಲದಿಂದಲೂ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇವೆ. ಇದೀಗಾ ಪ್ರಭಾವಿಯೊಬ್ಬರು ರಸ್ತೆಗೆ ಟ್ರಂಚ್ ಹೊಡೆಸುತ್ತಿರುವುದರಿಂದ ಅನುಮೋದನೆಯಾಗಿರುವ ಕಾಮಗಾರಿಗಳು ಅರ್ಧಕ್ಕೆ ನಿಂತು ಹಣ ಸುಲಭವಾಗಿ ಗುತ್ತಿಗೆದಾರರ ಜೇಬು ಸೇರುವಂತಾಗಿದೆ ಎಂದು ಆರೋಪಿಸಿದ ಬೂಚೇನಹಳ್ಳಿ, ಗುಟ್ಟೆಜಾಲಿಹಳ್ಳಿ ಹಾಗೂ ಗೌರೆಡ್ಡಿಪಾಳ್ಯದ ನಿವಾಸಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೂಚೇನಹಳ್ಳಿ, ಗುಟ್ಟೆಜಾಲಿಹಳ್ಳಿ ಹಾಗೂ ಗೌರೆಡ್ಡಿಪಾಳ್ಯದ ಸುಮಾರು 200 ಕುಟುಂಬಗಳ ಜನರು ಕೊಡಿಗೇನಹಳ್ಳಿಗೆ ಹಾಗೂ ವಿವಿಧ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ರಸ್ತೆ ಮಾರ್ಗವಾಗಿ ಪ್ರತಿ ದಿನ ಓಡಾಡುತ್ತಿದ್ದಾರೆ. ಈ ಮೂರು ಗ್ರಾಮಗಳ ಜನರಿಗೆ ಸಂಚರಿಸಲು ಪ್ರತ್ಯೇಕ ರಸ್ತೆ ಇಲ್ಲದಿರುವ ಕಾರಣ ನೂರಾರು ವರ್ಷಗಳಿಂದ ಹಳ್ಳ ಹರಿಯುವ ಜಾಗವನ್ನೇ ರಸ್ತೆ ಮಾಡಿಕೊಂಡು ಸಂಚರಿಸುತ್ತಿದ್ದಾರೆ ಎಂದು ತಿಳಿಸಿದರು.
ಮೂರು ಗ್ರಾಮಗಳಿಗೆ ಪ್ರತ್ಯೇಕ ರಸ್ತೆ ಇಲ್ಲದ ಕಾರಣ ಹಳ್ಳದ ಜಾಗವನ್ನೇ ರಸ್ತೆ ಮಾಡಿಕೊಂಡು ಸಂಚರಿಸುತ್ತಿದ್ದು ಗುತ್ತಿಗೆದಾರ ರಸ್ತೆ ಎತ್ತರ ಮಾಡಿ ಹಳ್ಳವನ್ನು ಮುಚ್ಚಿದ್ದು ಕೋಡಿ ನೀರು ಹರಿದರೆ ನೇರವಾಗಿ ನಮ್ಮ ಜಮೀನಿಗೆ ನುಗುತ್ತದೆ ರಸ್ತೆ ಅಭಿವೃದ್ಧಿ ಮಾಡಲಿ ಆದರೆ ಹಳ್ಳ ಕೊಳ್ಳಗಳನ್ನು ಮುಚ್ಚುವ ಅಧಿಕಾರ ಯಾರು ಕೊಟ್ಟಿದ್ದಾರೆ ಎಂದು ನಿವಾಸಿ ಅಶ್ವತ್ಥ ರೆಡ್ಡಿ ಪ್ರಶ್ನಿಸಿದ್ದಾರೆ.
ಇಲ್ಲಿನ ಜನರು, ವೃದ್ದರು, ಗರ್ಭಿಣಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಪಡುವ ಸಂಕಷ್ಟಗಳನ್ನು ಕಂಡ ಕೆಲವರು ತಮ್ಮ ಜಮೀನಿನಲ್ಲೆ ಸ್ವಲ್ಪ ಜಾಗವನ್ನು ರಸ್ತೆ ಅಭಿವೃದ್ದಿಗೆ ಬಿಟ್ಟು ಕೊಟ್ಟಿದ್ದಾರೆ. ಆದರೆ, ಇನ್ನು ಕೆಲವರು ಹಳ್ಳದ ಜಾಗ ನಮ್ಮದು ಇಲ್ಲಿ ರಸ್ತೆ ಅಭಿವೃದ್ದಿ ಮಾಡಬಾರದೆಂದು ಜೆಸಿಬಿಯಿಂದ ನಡು ರಸ್ತೆಯಲ್ಲಿ ಟ್ರಂಚ್ ಹೊಡೆಸಿ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರಕ್ಕಾಗಿ ಡಾಂಬರು ಅಥವಾ ಸಿಸಿ ರಸ್ತೆ ಮಾಡಿಸಿ ಕೊಡಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಿ. ನರಸರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ರಘುರೆಡ್ಡಿ, ತೆಲಗು ಅಶ್ವತ್ಥಪ್ಪ, ನಾಗರೆಡ್ಡಿ, ಅಪ್ಪರೆಡ್ಡಿ, ಭೂಪಾಲ್ ರೆಡ್ಡಿ, ಸಿದ್ದರೆಡ್ಡಿ, ಗಂಗರೆಡ್ಡಿ, ಕೃಷ್ಣಾರೆಡ್ಡಿ, ಓಬರೆಡ್ಡಿ, ರಾಜಗೋಪಾಲರೆಡ್ಡಿ, ನರಸಿಂಹರೆಡ್ಡಿ, ನಾರಾಯಣಪ್ಪ, ಚಿನ್ನಪ್ಪರೆಡ್ಡಿ, ಪ್ರಭಾಕರರೆಡ್ಡಿ, ನಾರಾಯಣಪ್ಪ, ಸತ್ಯನಾರಾಯಣರೆಡ್ಡಿ, ಬಸವರಾಜು, ದಿವಾಕರ್ ರೆಡ್ಡಿ, ಶಂಕರರೆಡ್ಡಿ ಇದ್ದರು
ಕೊಡಿಗೇನಹಳ್ಳಿಯ ಹೋಬಳಿಯ ಬೂಚೇನಹಳ್ಳಿ, ಗುಟ್ಟೆ ಜಾಲಿಹಳ್ಳಿ ಹಾಗೂ ಗೌರೆಡ್ಡಿ ಪಾಳ್ಯಕ್ಕೆ ಸೂಕ್ತ ರಸ್ತೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟಿಸಿದರು.