ತುಮಕೂರು :
ಪಾವಗಡದ ಶ್ರೀರಾಮಕೃಷ್ಣ ಸೇವಾ ಆಶ್ರಮದವತಿಯಿಂದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲೂಕುಗಳ 7 ರಿಂದ 10ನೇ ತರಗತಿಯ ಮಕ್ಕಳಿಗಾಗಿ ದೂರ ತರಂಗ ಶಿಕ್ಷಣ ಹಾಗೂ ಕೌಶಲ್ಯ ನೈಪುಣ್ಯ ಯೋಜನೆ ಗಳನ್ನು ಆರಂಭಿಸಲಾಗಿದೆ ಎಂದು ಸ್ವಾಮೀ ಜಪಾನಂದ ಜೀ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ, ಸ್ವಾಮೀ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರ ಹಾಗೂ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದವತಿಯಿಂದ ಕೇಂದ್ರದ ಸುತ್ತಮುತ್ತಲ 500 ಹಳ್ಳಿಗಳ ಆರೋಗ್ಯ,ಅಕ್ಷರ,ಆಸರೆ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ 27 ಯೋಜನೆಗಳನ್ನು ಹಮ್ಮಿ ಕೊಂಡಿದ್ದು, ಆನ್‍ಲೈನ್ ತರಗತಿಗಳಿಂದ ವಂಚಿತರಾಗುತ್ತಿದ್ದ ಗಡಿನಾಡಿನ ಮಕ್ಕಳನ್ನು ಗಮನದಲ್ಲಿಸಿಕೊಂಡು ದೂರ ತರಂಗ ಶಿಕ್ಷಣ ಮತ್ತು ಕೌಶಲ್ಯ ನೈಪುಣ್ಯ ಯೋಜನೆ ಜಾರಿಗೆ ತರಲಾಗಿದೆ ಎಂದರು.
30 ವರ್ಷಗಳ ನಿರಂತರ ಸೇವೆಯ ಪಕ್ಷಿನೋಟ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಸ್ಥೆಯ ಬಗ್ಗೆ ಬರೆದ ಮೆಚ್ಚುಗೆಯ ಪತ್ರವನ್ನು ಕುರಿತು ಪತ್ರಕರ್ತರೊಂದಿಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದ ಅವರು ನಮ್ಮ ಸಂಸ್ಥೆಯ ಕಾರ್ಯ ಯೋಜನೆಗಳನ್ನು ಮೆಚ್ಚಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದು ಪ್ರಶಂಶಿಸಿದ್ದಾರೆ. ಇದರಿಂದ ನಮಗೆ ಬಹಳ ಸಂತೋಷ ಉಂಟಾಗಿದೆ. ಅಲ್ಲದೇ ಇನ್ನೂ ಅನೇಕ ಕೆಲಸಗಳನ್ನು ಕೈಗೊಳ್ಳಲು ಬಲ ಬಂದಂತಾಗಿದೆ ಎಂದರು.
30 ವರ್ಷಗಳ ತಮ್ಮ ಸುದೀರ್ಘ ಸೇವೆಯನ್ನು ಸ್ಮರಿಸಿಕೊಳ್ಳುತ್ತಾ ತಾವು ಮಾಡುತ್ತಿರುವ ಕಾರ್ಯಗಳಿಂದ ಬಡವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿವೆ, ಸಮಾಜದಲ್ಲಿ ಇರುವ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದೇವೆ, ಇನ್ನೂ ಕೆಲವೊಂದು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಸಮಾಜದ ಮುಖ್ಯ ನೆಲೆಗೆ ತರುವ ಉದ್ದೇಶ ನಮ್ಮದಾಗಿದೆ ಎಂದರು.
ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಸೌಲಭ್ಯ ಭರಿತ ಆಸ್ಪತ್ರ ನಿರ್ಮಾಣ ಮಾಡಿದ್ದು ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡುತ್ತೇವೆ ಎಂದರು. ಆನ್‍ಲೈನ್ ತರಗತಿಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ದೃಷ್ಠಿ ದೋಷಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಶಾಲೆಗಳ ಹಾಗೂ ಶಿಶು ವಿಹಾರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ವಿಶೇಷವಾದ ಕಣ್ಣಿನ ಪರೀಕ್ಷೆ ಹಾಗೂ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪಾವಗಡದಲ್ಲಿ ಶಿಶುಗಳಿಗೆ ಹಾಗೂ ಹತ್ತು ವರ್ಷದ ಒಳಗಿನ ಮಕ್ಕಳಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದು, ಈ ರೀತಿಯ ಶಸ್ತ್ರ ಚಿಕಿತ್ಸೆಯನ್ನು ಮುಂದುವರೆಸುವ ದಿಕ್ಕಿನಲ್ಲಿ ಅತ್ಯಂತ ಉತ್ಕøಷ್ಟವಾದ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಪಾವಗಡಲ್ಲಿ ಕುಷ್ಟರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ, ಇದುವರೆವಿಗೂ 3860 ಕುಷ್ಠ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ ಹೆಗ್ಗಳಿಕೆ ನಮ್ಮ ಸಂಸ್ಥೆಗೆ ಸಲ್ಲುತ್ತದೆ ಎಂದು ಹೆಮ್ಮೆಯಿಂದ ಹೇಳಿದರು.
ಬಿಕ್ಷುಕ ಮುಕ್ತ ದೇಶ ನೋಡುವುದು ನನ್ನ ಆಶಯ, ಈ ಕಾರಣದಿಂದ ಅನೇಕ ರೀತಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಶಿಕ್ಷಣ, ಆರೋಗ್ಯ, ಆಸರೆ ಹಾಗೂ ಆದ್ಯಾತ್ಮ ಇವು ನನ್ನ ಜೀವನದ ಮುಖ್ಯ ಆಶಯ, ಇವುಗಳ ಅಭಿವೃದ್ಧಿಗೆ ನನ್ನ ಕೈ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಶ್ರೀರಾಮಕೃಷ್ಣ ಸೇವಾಶ್ರಮದ ವ್ಯವಸ್ಥಾಪಕ ನಾಗರಾಜು ಉಪಸ್ಥಿತರಿದ್ದರು.