ಮಧುಗಿರಿ :
ರಾಜ್ಯ ಸರಕಾರ ಗ್ರಾಮೀಣ ಭಾಗದ ಬಡವರು ಹಾಗೂ ಹಳ್ಳಿಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಫಲಾನುಭವಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಗರಣಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗರಣಿ ಗ್ರಾ.ಪಂ.ನಿಂದ ವಿವಿಧ ಫಲಾನುಭವಿಗಳಿಗೆ ಹಲವಾರು ಯೋಜನೆಯಡಿ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ದೇಶವು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯಲು ಮೊದಲು ಹಳ್ಳಿಗಳ ಅಭಿವೃದ್ಧಿಯಾಗಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂೀಜಿಯವರು ಹೇಳಿದ್ದರು. ಕುಮಾರಸ್ವಾಮಿ ನೇತೃತ್ವದ ಸರಕಾರವು ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಗ್ರಾಮೀಣ ಜನರ ಬದುಕನ್ನು ಆರ್ಥಿಕವಾಗಿ ಸದೃಢವಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ವಿಕಲಚೇತನರಿಗೆ ಸಹಾಯಧನ, ಮನೆಯಿಲ್ಲದವರಿಗೆ ಸೂರು, ಶುದ್ಧ ಕುಡಿಯುವ ನೀರು, ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ವಿತರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಸಾರ್ವಜನಿಕರು ಸರಕಾರಕ್ಕೆ ಸಹಕಾರ ನೀಡಿ, ತಮಗೆ ಸಿಗಬಹುದಾದ ಸೌಲಭ್ಯಗಳನ್ನು ಪಡೆಯುವಂತೆ ಮನವಿ ಮಾಡಿದರು.
ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ ಮಾತನಾಡಿ ಗರಣಿ ಗ್ರಾಮ ಪಂಚಾಯ್ತಿಯು ಹಿಂದುಳಿದ ಪಂಚಾಯ್ತಿಯಾಗಿದೆ. ಅದಕ್ಕೆ ಸೂಕ್ತ ರೀತಿಯಲ್ಲಿ ಸರಕಾರದ ಅನುದಾನವನ್ನು ಕಲ್ಪಿಸಿಕೊಡಲು ಶಾಸಕರು ಸಿದ್ಧರಿದ್ದು, ಅರ್ಹ ಬಡವರು ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯುವಂತೆ ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷ ಗೋವಿಂದರಾಜು ಮಾತನಾಡಿ, ನಮ್ಮ ಪಂಚಾಯ್ತಿಯಲ್ಲಿ ಇನ್ನೂ ಅನೇಕ ಮೂಲಭೂತ ಸೌಲಭ್ಯಗಳು ದೊರೆಯಬೇಕಿದ್ದು, ಹೆಚ್ಚಿನ ಮನೆಗಳು ಹಾಗೂ ರಸ್ತೆ-ಚರಂಡಿಯನ್ನು ಮುಂದಿನ ಅನುದಾನದಲ್ಲಿ ಒದಗಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ 60 ಮಂದಿ ವಿಕಲಚೇತನರಿಗೆ ಸಹಾಯಧನ, 43 ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಮನೆಗಳ ಆದೇಶಪತ್ರ, ಹಾಗೂ ಶಾಲಾ ಮಕ್ಕಳಿಗೆ ಸೈಕಲ್‍ಗಳನ್ನು ಶಾಸಕರು ವಿತರಿಸಿದರು.