ತುಮಕೂರು :
ಕೋವಿಡ್-19 ಹಿನ್ನಲೆಯಲ್ಲಿ ಪದವಿ ಪೂರ್ವ ಕಾಲೇಜುಗಳು ಆರಂಭಗೊಳ್ಳಲು ವಿಳಂಬವಾದ ಕಾರಣ ಶಿಕ್ಷಣ ಸಚಿವರ ಸೂಚನೆ ಮೇರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಕನ್ನಡ ವಿಷಯದಲ್ಲಿ ಪಠ್ಯ ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದ್ದು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕಡಿತಗೊಂಡ ಪಠ್ಯಕ್ರಮ ಹೊರತು ಪಡಿಸಿ ಪರೀಕ್ಷೆಗೆ ಸಿದ್ಧರಾಗುವಂತೆ ಮಾರ್ಗದರ್ಶನ ನೀಡಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಕೆ.ನರಸಿಂಹಮೂರ್ತಿ ತಿಳಿಸಿದರು.
ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪದವಿ ಪೂರ್ವ ಶಿಕ್ಷಣದಲ್ಲಿ ಕನ್ನಡ ವಿಷಯದಲ್ಲಿ ಕಡಿತಗೊಂಡ ಪಠ್ಯಕ್ರಮದ ಬಗ್ಗೆ ವಿಶ್ಲೇಷಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಥಮ ಪಿಯುಸಿಯಲ್ಲಿ ನಾಲ್ಕು ಪದ್ಯಭಾಗ ಮತ್ತು ಎರಡು ಗದ್ಯಭಾಗಗಳ ವ್ಯಾಕರಣಾಂಶ ತೆಗೆಯಲಾಗಿದ್ದು, ಅದೇ ರೀತಿ ದ್ವಿತೀಯ ಪಿಯುಸಿಯಲ್ಲಿ ಮೂರು ಪದ್ಯಭಾಗ ಮತ್ತು ಎರಡು ಗದ್ಯ ಭಾಗ ಹೊರತು ಪಡಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಪದವಿ ಉಪನ್ಯಾಸಕರು ಪದವಿ ಪೂರ್ವ ಉಪನಾಸಕರನ್ನು ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನಿಸದೆ ಒಂದು ರೀತಿಯಲ್ಲಿ ಶೋಷಣೆಗೊಳಗಾಗಿದ್ದಾರೆ. ಆದರೆ ನೀವು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದನ್ನು ಮೌಲ್ಯಮಾಪನದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದಿರಾ ಎಂದರು.
ಕಾಲೇಜುಗಳಲ್ಲಿ ಶೇ.100ಕ್ಕೆ 100ರಷ್ಟು ಫಲಿತಾಂಶ ಬರುವಂತೆ ಉಪನ್ಯಾಸಕರು ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ನಾವೆಲ್ಲಾ ಪ್ರಯತ್ನಪಟ್ಟರೆ ಅಸಾಧ್ಯವಾದುದನ್ನು ಸಾಧಿಸಬಹುದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆಧ್ಯತೆ ನೀಡುವಂತೆ ತಿಳಿಸಿದರು.
ವೇದಿಕೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಹಾಗೂ ಸಂಸ್ಕøತಿ ಚಿಂತಕ ರಾಜಪ್ಪ ದಳವಾಯಿ ಮಾತನಾಡಿ, ಕನ್ನಡದಲ್ಲಿ ರಾಮಾಯಣದ ಪರಂಪರೆ ಹಾಗೂ ಮಹಾಭಾರತದ ಪರಂಪರೆ ಎರಡು ಮಹಾಪಠ್ಯಗಳಿದ್ದು, ರಾಮಚಂದ್ರ ಚರಿತ ಪುರಾಣ ಕನ್ನಡದ ಮೊದಲ ರಾಮಾಯಣ, ಕುಮಾರವ್ಯಾಸ ಭಾರತ ಈ ಎರಡು ಪಠ್ಯಗಳಿವೆ. ರಾಮಾಯಣ ಮತ್ತು ಮಹಾಭಾರತ ಪರಂಪರೆ ಸಂಸ್ಕøತ ಪರಂಪರೆಗಿಂತ ಭಿನ್ನವಾದವು ಎಂದರು.
ಕನ್ನಡದಲ್ಲಿ ಆ ಭಿನ್ನವಾದ ಪಠ್ಯಗಳೇ ಇಲ್ಲಿ ಪಠ್ಯವಾಗಿದೆ. ಮತ್ತೆ ಉಳಿದ ಪಠ್ಯಗಳು ಹೇಗಿವೆ. ಮತ್ತೆ ಹೊಸಕಾಲದಲ್ಲಿ ಹೇಗೆ ಬೆಳೆದು ಬಂದಿವೆ ಎಂಬುದಕ್ಕೆ ರಾಮಾಯಣ ಹಾಗೂ ಮಹಾಭಾರತ ಇಂದಿಗೂ ರಂಗಭೂಮಿಯಲ್ಲಿ ಜೀವಂತವಾಗಿರುವುದೇ ಸಾಕ್ಷಿ ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಕೋವಿಡ್-19 ಹಿನ್ನಲೆಯಲ್ಲಿ ಪದವಿ ಪೂರ್ವ ಪಠ್ಯಕ್ರಮದಲ್ಲಿ ಪ್ರಥಮ ಪಿಯುಸಿಯಲ್ಲಿ ಮತ್ತೆ ಸೂರ್ಯ ಬರುತ್ತಾನೆ, ಸುನಾಮಿ ಹಾಡು, ಹೊಲಿಗೆ ಯಂತ್ರದ ಅಮ್ಮಿ, ಜೀವಕ್ಕೆ ಇಂಧನ ಈ ಪದÀ್ಯಭಾಗಗಳನ್ನು ಕಡಿತಗೊಳಿಸಲಾಗಿದ್ದು, ಕೃಷಿ, ಸಂಕೃತಿ ಮತ್ತು ಜಾಗತೀಕರಣ, ಚತುರನ ಚಾತುರ್ಯ ಈ ಗದ್ಯಭಾಗಗಳನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದರು. ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಒಂದು ಹೂ ಹೆಚ್ಚಿಗೆ ಇಡುತೀನಿ, ಹತ್ತಿ ಚಿತ್ತ ಮತ್ತು ಒಮ್ಮೆ ನಗುತ್ತೇವೆ ಈ ಮೂರು ಪದ್ಯ ಭಾಗಗಳನ್ನು ಕಡಿತಗೊಳಿಸಲಾಗಿದೆ. ತಿರುಳ್ಗನ್ನಡದ ಬೆಳ್ನುಡಿ ಮತ್ತು ಹಳ್ಳಿಯ ಚಹಾ ಹೋಟೆಲ್‍ಗಳು ಈ ಗದ್ಯ ಭಾಗಗಳನ್ನು ಕಡಿತಗೊಳಿಸಲಾಗಿದೆ. ಇದು ಕೇವಲ ಈ ವರ್ಷದ ಪರೀಕ್ಷೆಗಳಿಂದ ವಿನಾಯಿತಿ ಅಷ್ಟೇ, ಮುಂದಿನ ವರ್ಷ ಯಥಾಪ್ರಕಾರ ಇರಲಿದೆ ಎಂದು ಸ್ಪಷ್ಟಪಡಿಸಿದರು
ಶಿಕ್ಷಣ ಸಚಿವರು, ಹಾಗೂ ಇಲಾಖೆ ನಿರ್ದೇಶಕರು ನನ್ನನ್ನು ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ ಪರಿಣಾಮ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಸವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಆರಾಧ್ಯ ಮತ್ತು ಉಪನ್ಯಾಸಕರಾದ ಎನ್.ಕೃಷ್ಣಯ್ಯ ಅವರು ಅರ್ಥಶಾಸ್ತ್ರ ಮತ್ತು ಇಂಗ್ಲೀಷ್ ಮೌಲ್ಯಮಾಪನ ತುಮಕೂರಿಗೆ ಬಂದಿದೆ. ಕನ್ನಡ ಮೌಲ್ಯಮಾಪನವನ್ನೂ ತುಮಕೂರಿಗೆ ತರಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಿಡಿಪಿಯು ಹೆಚ್.ಕೆ.ನರಸಿಂಹಮೂರ್ತಿ, ನಿವೃತ್ತ ಡಿಡಿಪಿಯು ಕೆ.ಎಸ್. ಸಿದ್ಧಲಿಂಗಪ್ಪ, ಸಾಹಿತಿ ರಾಜಪ್ಪ ದಳವಾಯಿ, ಪ್ರಾಚಾರ್ಯ ನೇ.ರಂ.ನಾಗರಾಜು, ಎಂಪ್ರೆಸ್ ಕಾಲೇಜಿನ ಪ್ರಾಚಾರ್ಯ ಎಸ್.ಷಣ್ಮುಖ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಪ್ರೆಸ್ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಎಸ್.ಷಣ್ಮುಖ ವಹಿಸಿದ್ದರು. ಪ್ರಾಂಶುಪಾಲ ಚಂದ್ರಶೇಖರ ಆರಾಧ್ಯ, ಡಾ.ಕೆ.ವಿ.ಸುಬ್ಬರಾವ್, ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಹೆಚ್.ಗೋವಿಂದಯ್ಯ, ಹಡವನಹಳ್ಳಿ ದಿಗ್ವಿಜಯ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಮಲ್ಲಿಕಾರ್ಜುನ, ಆಂಗ್ಲ ಉಪನ್ಯಾಸಕ ಜಯಶೀಲ, ಉಪನ್ಯಾಸಕರಾದ ಎನ್.ಕೃಷ್ಣಯ್ಯ, ಎ.ರಾಮಚಂದ್ರ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕ, ಉಪನ್ಯಾಸಕಿಯರು, ಬಡ್ತಿ ಹೊಂದಿದ ಪ್ರಾಚಾರ್ಯರು, ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಉಪನ್ಯಾಸಕರಾದ ಡಾ.ಮುದ್ದವೀರಪ್ಪ, ಮಾರುತೇಶ್, ಪ್ರೇಮಲೀಲಾ, ಕೆ.ಜಜಿ.ಯತೀಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.