ತುಮಕೂರು :
ನಗರದ ಯಲ್ಲಾಪುರದಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಬಂಧಿತ ವ್ಯಕ್ತಿಯಿಂದ ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕೊರಟಗೆರೆ ತಾಲ್ಲೂಕು, ಭೋವಿ ಕಾಲೋನಿ ಗ್ರಾಮದ ಚಿನ್ನ ರಾಮಾಂಜಿ 34. ಎಂಬಾತ ತುಮಕೂರು ನಗರದ ಯಲ್ಲಾಪುರದಲ್ಲಿ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಒಂದು ಕೆಜಿ ಗಾಂಜಾ ವಶಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಬಳಿಕ ಮತ್ತೊಬ್ಬ ಹೆಂಗಸು ಗಾಂಜಾ ಮಾರಾಟ ಮಾಡುತ್ತಿರುವ ವಿಷಯ ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಮುದ್ದಿನಪಲ್ಲಿ ಗ್ರಾಮದಲ್ಲಿ ದೇವಮ್ಮ 34. ಗಾಂಜಾವನ್ನು ಆಂಧ್ರ ಪ್ರದೇಶದ ವಿಶಾಖ ಪಟ್ಟಣದ ಬಳಿ ನ್ಯೂನಿ ಎಂಬಲ್ಲಿಂದ ತಂದು ರಾಮಾಂಜಿ ಮೂಲಕ ಮಾರಾಟ ಮಾಡಿಸುತ್ತಿದ್ದಳು.
ದೇವಮ್ಮನನ್ನು ಮಾ.25 ರಂದು ಬಂಧಿಸಿರುವ ಪೊಲೀಸರು ಆಕೆಯಿಂದ 11 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಬಂಧಿಸಿದ್ದಾರೆ. ಚಿನ್ನ ರಾಮಾಂಜಿ ಮೇಲೆ 2020 ರಲ್ಲಿ ಕೋರ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣದಲ್ಲಿ ದಸ್ತಗಿರಿ ಮಾಡಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ಪುನಃ ಇದೇ ವೃತ್ತಿಯಲ್ಲಿ ತೊಡಗಿಕೊಂಡಿದ್ದ.
ಅಪರ ಪೊಲೀಸ್ ಅಧೀಕ್ಷಕರು ಉದೇಶ್ ಟಿ.ಜೆ ಹಾಗೂ ಡಿವೈಎಸ್‍ಪಿ ಸೂರ್ಯನಾರಾಯಣ ರಾವ್ ಇವರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ವಿ ಶೇಷಾದ್ರಿ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಶಮೀನ್ ಮತ್ತು ಕುಮಾರಿ ಹಾಗೂ ಸಿಬ್ಬಂದಿ ಗಳಾದ ಅಯೂಬ್, ಮಲ್ಲೇಶ್, ರಮೇಶ್, ಶಿವಪ್ರಸಾದ್, ರವಿಕುಮಾರ್ ರೆಡ್ಡಿ ಹಾಗೂ ಮಹಿಳಾ ಪಿಸಿ ಅಮ್ಮಾಜಮ್ಮಾ ಆರೋಪಿಗಳನ್ನು ಪತ್ತೆ ಮಾಡಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಸಿಕೃಷ್ಣ ಅಭಿನಂದಿಸಿದ್ದಾರೆ.