ಚಿಕ್ಕನಾಯಕನಹಳ್ಳಿ:
ಸಮೀಪದ ಹೊನ್ನೇಬಾಗಿಯ ಗೊಲ್ಲರಹಳ್ಳಿಬಳಿ ತೋಟವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ತೆಂಗು, ಅಡಿಕೆಮರಗಳು ಹಾಗೂ ಒಂದು ಟ್ರಾಕ್ಟರ್ ಸುಟ್ಟುಹೋಗಿದೆ.
ಗೊಲ್ಲರಹಳ್ಳಿ ಸ.ನಂ. 25,26ರಲ್ಲಿ ಗುರುಮೂರ್ತಿ ಹಾಗೂ ಉಮೇಶ್ ಎಂಬುವರಿಗೆ ಸೇರಿದ ತೋಟದ ಬೇಲಿಯಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡು ನಂತರ ಇಡೀ ತೋಟಕ್ಕೆ ವ್ಯಾಪಿಸಿದೆ, ಜೊತೆಗೆ ತೋಟದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಸಹಿತ ಟ್ರ್ಯಾಕ್ಟರ್‍ಗೂ ಸಹ ಬೆಂಕಿಯ ಕೆನ್ನಾಲಿಗೆ ತಾಗಿದ ಪರಿಣಾಮ ಭಾಗಶಃ ಟ್ರ್ಯಾಕ್ಟರ್ ಸುಟ್ಟುಹೋಗಿದೆ. ಬೆಂಕಿ ಬಿದ್ದ ವಿಷಯ ತಿಳಿದ ಸುತ್ತಮುತ್ತಲಿನ ಜನರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಕತ್ತಲೆಯಿದ್ದ ಕಾರಣ ಬೆಂಕಿ ನಂದಿಸಲು ಸ್ಥಳೀಯರು ಹೆಣಗಾಡಬೇಕಾಯಿತು. ಕೇವಲ 3 ಕಿ.ಮೀ. ಸಮೀಪದಲ್ಲಿರುವ ಅಗ್ನಿ ಶಾಮಕ ಠಾಣೆಯಿಂದ ವಾಹನ ಇಲ್ಲಿಗೆ ಬರುವಷ್ಟರಲ್ಲಿ ಸ್ಥಳೀಯರೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಈ ಘಟನೆಯಲ್ಲಿ ಸುಮಾರು 50 ತೆಂಗಿನ ಮರ ಹಾಗೂ ಅಡಿಕೆಮರಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆಯ ವೇಳೆ ರೈತರು ತಮ್ಮ ಅಳಲು ತೋಡಿಕೊಂಡಿದ್ದು, ಆಕಸ್ಮಿಕ ಬೆಂಕಿಯಿಂದ ಆದ ಅಪಾರ ಪ್ರಮಾಣದ ನಷ್ಟಕ್ಕೆ ಪರಿಹಾರ ಒದಗಿಸಲು ಸಹಾಯ ಮಾಡುವಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.