ತುಮಕೂರು:
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರ ಮೇಲ್ಡಂಡೆ ನೀರಾವರಿ ಯೋಜನೆಗಳಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಸಮಗ್ರ ಯೋಜನೆಯ ರೂಪು-ರೇಷಗಳನ್ನು ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಯೋಜನೆಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚರ್ಚೆ ನಡೆಸಿದರು.
ಜಿಲ್ಲಾ ಪಂಚಾಯಿತಿಯ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ಯೋಜನೆಗಳಿಂದ ತಾಲ್ಲೂಕುವಾರು ನೀರಿನ ಸಮಗ್ರ ಹಂಚಿಕೆಯ ಬಗ್ಗೆ ವಿಸ್ತøತವಾಗಿ ಚರ್ಚೆ ನಡೆಸಿದರು.
ಮೂರು ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಶೇ.50ರಷ್ಟು ಜಿಲ್ಲೆಯ ಕೆರೆಗಳು ತುಂಬಲಿವೆ. ಹಂಚಿಕೆಯಾದ ಎಲ್ಲಾ ಕೆರೆಗಳನ್ನು ಶೇ.50 ರಷ್ಟಾದರೂ ತುಂಬಿಸುವ ಗುರಿ ಹೊಂದಲಾಗಿದೆ. ಹೇಮಾವತಿಯಿಂದ ಜಿಲ್ಲೆಗೆ ಹರಿಯುವ ನೀರನ್ನು ಈ ವರ್ಷ ಸಮಗ್ರವಾಗಿ ಬಳಕೆ ಮಾಡಲಾಗಿದೆ. ಆದರೆ, ನೀರು ಹರಿಯುವಿಕೆ, ಆವಿ ಇತ್ಯಾದಿ ಅಂಶಗಳಿಂದ ಮೂರು ಟಿಎಂಸಿ ನೀರು ಅಪವ್ಯಯವಾಗಿದ್ದು, ಕೆರೆಗಳಿಗೆ ಹಂಚಿಕೆಯಾದ ನೀರು ಅಪವ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹೇಮಾವತಿಯಿಂದ ಹಂಚಿಕೆಯಾದ ನೀರು ಬಹುತೇಕ ಕೆರೆಗಳಲ್ಲಿ ತಳದಲ್ಲಿಯೂ ನಿಲ್ಲುವುದಿಲ್ಲ. ಹೆಸರಿಗೆ ಮಾತ್ರ ನೀರು ಹಂಚಿಕೆ ಮಾಡಲಾಗಿದೆ. ಇದನ್ನು ಮಾರ್ಪಡಿಸಬೇಕು. ಕಡಿಮೆ ಹಂಚಿಕೆಯಾದ ಅಥವಾ ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆಯ ನಾಲೆಗಳಿಗೆ ಸಮೀಪದ ಕೆರೆಗಳನ್ನು ಈ ಯೋಜನೆಗಳಿಂದಲೇ ತುಂಬಿಸಲಾಗುವುದು. ಇಂತಹ ಕೆರೆಗಳಿಗೆ ನಿಗದಿಯಾದ ನೀರನ್ನು ಕಡಿಮೆ ಹಂಚಿಕೆಯಾದ ಕೆರೆಗಳಿಗೆ ಹರಿಸುವ ಯೋಜನೆ ಸಿದ್ದಪಡಿಸಬೇಕು ಎಂದು ಹೇಮಾವತಿ ಅಧಿಕಾರಿಗೆ ಸೂಚಿಸಿದರು.
ನೀರಾವರಿ ಯೋಜನೆಯ ಭೂ ಸ್ವಾಧೀನಕ್ಕಾಗಿ ರೈತರಿಗೆ ಪರಿಹಾರ ಶೀಘ್ರ ತಲುಪಿಸುವ ವ್ಯವಸ್ಥೆಯಾಗಬೇಕು.2013ರ ಕಾಯ್ದೆ ಅಂತೆ ಭೂಸ್ವಾಧೀನಾ ಕಾಯ್ದೆಗೆ ಹಣ ಮೀಸಲಿಡಬೇಕು ಎಂದು ನೀರಾವರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಸೂಚಿಸಿದರು.
ಗುಬ್ಬಿ ಶಾಸಕ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ನೀರಾವರಿ ಹಿತದೃಷ್ಟಿಯಿಂದ ಈ ಯೋಜನೆ ಉತ್ತಮವಾಗಿದ್ದು, ನೀರಿನ ಹಂಚಿಕೆ ಹೇಗೆ ಎಂಬ ಬಗ್ಗೆ ಸಚಿವರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶೇ.50 ರಷ್ಟು ನೀರನ್ನು ಹಂಚಿಕೆ ಮಾಡಬಹುದಾಗಿದೆ. ಗುಬ್ಬಿ ತಾಲೂಕಿನ ಹಾಗಲವಾಡಿ ಕೆರೆಗೆ ನೀರು ಹರಿಸಲು ನಾಲ್ಕು ಕಿಲೋ ಮೀಟರ್ ನಾಲೆ ಮಾಡಬೇಕಾಗಿರುವುದರಿಂದ ಪೈಪ್ ಲೈನ್ ಮಾಡಲು ಸೂಚಿಸಲಾಗಿದೆ ಎಂದರು.
ಪಾವಗಡ ಶಾಸಕ ವೆಂಕಟರಮಣಪ್ಪ ಮಾತನಾಡಿ, ಬರಪೀಡಿತವಾದ ಪಾವಗಡ ತಾಲ್ಲೂಕಿಗೆ ಕಡಿಮೆ ನೀರಿನ ಹಂಚಿಕೆ ಇದ್ದು, ಬೇರೆ ನೀರಾವರಿ ನೀರಿನ ಮೂಲಗಳು ಇಲ್ಲ. ಹಾಗಾಗಿ ಪಾವಗಡ ತಾಲೂಕಿಗೆ ಹೆಚ್ಚು ನೀರಿನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.
ತುಂಗಭದ್ರ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ನೀರಿನ ಹಂಚಿಕೆಯನ್ನು ಕೆರೆಗಳ ವಿಸ್ತೀರ್ಣದ ಆಧಾರದ ಮೇಲೆ ಮಾಡಲಾಗಿದ್ದು, ಅದರಂತೆ 38 ಕೆರೆಗಳಿಗೆ ನೀರು ಹರಿಸಲು ಯೋಜಿಸಲಾಗಿದೆ ಎಂದರು.
ಶಿರಾ ಶಾಸಕ ರಾಜೇಶ್ ಗೌಡ ಮಾತನಾಡಿ, ವಿಶೇಷ ಕಾರಣದಿಂದಾಗಿ ಮದಲೂರು ಕೆರೆಗೆ ನೀರು ಹರಿದಿದ್ದು, ಭದ್ರ ಮೇಲ್ದಂಡೆ ಯೋಜನೆ ಮೂಲಕ , ಕಳ್ಳಂಬೆಳ್ಳ ತರೂರು ಬ್ರಹ್ಮಸಂದ್ರದ ಕೆರೆಗಳಿಗೆ ನೀರು ಹರಿಸಲಾಗುವುದು. 20 ಕಿಲೋ ಮೀಟರ್ ಒಳಗೆ 12 ಚೆಕ್ ಡ್ಯಾಂಗಳಿವೆ. ಆದ್ದರಿಂದ ಹೇಮಾವತಿಯಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುವುದು ಕಷ್ಟ. ಹಾಗಾಗಿ ಭದ್ರಾ ಮೇಲ್ದಂಡೆಯಿಂದಲೇ ನೀರು ಹರಿಸೋಣ ಎಂದು ಸಚಿವರು ತಿಳಿಸಿದರು.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಮಾತನಾಡಿ, ಗ್ರಾಮಾಂತರ ಕ್ಷೇತ್ರದ 11 ಕೆರೆಗಳಿಗೆ ನೀರು ಹರಿಸಿರುವುದಕ್ಕೆ ಅಭಿನಂದನೆ. ವೃಷಭಾವತಿ ನೀರನ್ನು ತಾಲೂಕಿನ ಇನ್ನಷ್ಟು ಕೆರೆಗಳಿಗೆ ಹರಿಸಬೇಕು. ಗೂಳೂರು ಹಾಗೂ ಬೆಳ್ಳಾವಿ ಕೆರೆಗಳಿಗೆ ಹೆಚ್ಚು ನೀರಿನ ಹಂಚಿಕೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಬೆಳ್ಳಾವಿ ಕೆರೆಗೆ ಮೂರು ಎಂಸಿಎಫ್‍ಟಿ ನೀರು ಹರಿಸಲಾಗುತ್ತಿದ್ದು, ಹೆಸರಿಗಷ್ಟೇ ಹಂಚಿಕೆ ಎನ್ನುವಂತಾಗಿದೆ. ಹಾಗಾಗಿ ಬೆಳ್ಳಾವಿ ಮತ್ತು ಗೂಳೂರು ಹೋಬಳಿಯ ಕೆರೆಗಳನ್ನು ಶೇ.50ರಷ್ಟು ತುಂಬಿಸಬೇಕು. ಹೇಮಾವತಿಯಿಂದ ನೀರು ಹರಿಸಲು ಆಗದ ಕೆರೆಗಳಿಗೆ ಎತ್ತಿನಹೊಳೆ ಮೂಲಕ ನೀರು ಹರಿಸುತ್ತೇವೆ. ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಕೊಡಿ ಎಂದು ಹೇಮಾವತಿ ಅಧಿಕಾರಿಗೆ ಸೂಚಿಸಿದರು.
ಮಧುಗಿರಿ ತಾಲ್ಲೂಕಿನ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಮೂರು ನೀರಾವರಿ ಯೋಜನೆಗಳ ಫಲವಾಗಿ 111 ಕೆರೆಗಳಿಗೆ ನೀರು ಹರಿಸಲು ನಡೆಸಿರುವ ಚಿಂತನೆಗೆ ಧನ್ಯವಾದ. ಹೇಮೆ, ಎತ್ತಿನಹೊಳೆ ಹೊರತು ಪಡಿಸಿದರೆ ಬೇರೆ ನೀರಿನ ಮೂಲಗಳಿಲ್ಲ. ಆದ್ದರಿಂದ ಇನ್ನಷ್ಟು ಕೆರೆಗಳನ್ನು ತುಂಬಿಸುವಂತೆ ಕೇಳಿಕೊಂಡರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಗರದ ಭವಿಷ್ಯದ ದೃಷ್ಟಿಯಿಂದ ಎಂಸಿಎಫ್ಟಿ ನೀರನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕಾರ್ಯನಿರ್ವಹಿಸುತ್ತಿಲ್ಲ, ಆದ್ದರಂದ ಸಿರಾ ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ನೀರನ್ನು ಕೆರೆಗಳಿಗೆ ತುಂಬಿಸಲಿ. ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗಳು ಬೇಡ. ಕೆರೆಗಳಿಗೆ ನೀರು ತುಂಬಿಸಿದರೆ ಕೊಳವೆಬಾವಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಸಣ್ಣ ನೀರಾವರಿ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಎಸ್‍ಪಿ ಕೆ. ವಂಶಿಕೃಷ್ಣ, ಪೇಶ್ವೆ, ಮಹಾದೇವ ಸೇರಿದಂತೆ ಮೂರು ನೀರಾವರಿ ನಿಗಮದ ಇಂಜಿನಿಯರ್‍ಗಳು, ರೈತ ಮುಖಂಡರು ಹಾಜರಿದ್ದರು.