ತುಮಕೂರು :
ಕಟ್ಟಡ ಹಂತದಲ್ಲಿದ್ದ ಆಸ್ಪತ್ರೆಯಲ್ಲಿ ಮಹಿಳೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ್ದು, ವೈದ್ಯರ ನಿರ್ಲಕ್ಷದಿಂದಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ನಗರದ ರಾಜಲಕ್ಷ್ಮೀ ನರ್ಸಿಂಗ್ ಹೋಂನಲ್ಲಿ ಈ ಘಟನೆ ನಡೆದಿದ್ದು, ನೆಲಮಂಗಲ ತಾಲ್ಲೂಕಿನ ಹಳೆ ನಿಜಗಲ್ ಗ್ರಾಮದ ವಸಂತ (32)ಮೃತ ಪಟ್ಟ ದುರ್ದೈವಿ.
ಅಪೆಂಡಿಕ್ಸ್ ನಿಂದ ಬಳಲುತ್ತಿದ್ದ ವಸಂತ ನ.21 ರಂದು ರಾಜಲಕ್ಷ್ಮೀ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಳು. ನಿನ್ನೆ ಮದ್ಯಾಹ್ನ ಅಂದರೆ ನ.26 ರಂದು ಡಾ.ನರೇಂದ್ರ ರವರು ವಸಂತಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ್ದರು. ಆಸ್ಪತ್ರೆಯಲ್ಲಿ ಐಸಿಯು ಇಲ್ಲದ ಕಾರಣ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಸಂಜೆ ವೇಳೆಗೆ ಉಸಿರಾಟದ ಸಮಸ್ಯೆ ಅಧಿಕವಾದ ಕಾರಣ ತುರ್ತು ನಿಗಾ ಘಟಕದ ಅಗತ್ಯತೆ ಅನಿವಾರ್ಯವಾಗಿದ್ದು, ಚಿಕಿತ್ಸೆ ನೀಡದೇ ಟಿಎಚ್‍ಎಸ್ ಆಸ್ಪತ್ರೆಗೆ ಮಹಿಳೆಯನ್ನು ವರ್ಗಾಯಿಸಿ ಕೈತೊಳೆದುಕೊಂಡಿದ್ದಾರೆ. ಟಿಹೆಚ್‍ಎಸ್ ಆಸ್ಪತ್ರೆಗೆ ತೆರಳುತ್ತಿದ್ದಂತೆ ವಸಂತ ಮೃತಪಟ್ಟಿದ್ದಾಳೆ. ಆಸ್ಪತ್ರೆ ಯಲ್ಲಿನ ಅವ್ಯವಸ್ಥೆ, ವೈದ್ಯರ ನಿರ್ಲಕ್ಷದಿಂದ ವಸಂತಾ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೃತ ವಸಂತ ಕಡು ಬಡವರಾಗಿದ್ದು ವೈದ್ಯರ ಎಡವಟ್ಟಿನಿಂದ ವಸಂತಳ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ಮಕ್ಕಳ ಜೀವನೋಪಾಯಕ್ಕಾಗಿ ಪರಿಹಾರ ನೀಡುವಂತೆ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ನೆಲಮಂಗಲ ಶಾಸಕ ಶ್ರೀನಿವಾಸ್ ಆಗಮಿಸಿ ಮಾತುಕತೆ ನಡೆಸಿದರು. ಅದಕ್ಕೂ ಮುನ್ನ ನಗರದ ಉಪಾಧೀಕ್ಷಕ ನಾಗರಾಜು ಮತ್ತು ಪಾಲಿಕೆ ಸದಸ್ಯ ನಜೀರ್‍ರವರ ಮಧ್ಯಸ್ಥಿಕೆಯಲ್ಲಿ 5 ಲಕ್ಷ ಹಣಕ್ಕೆ ತೀರ್ಮಾನಿಸಲಾಯಿತು. ಆಸ್ಪತ್ರೆಯಿಂದ ಹೊರಬಂದ ನಜೀರ್ ರವರ ಮಾತು ಕೇಳಿ ಎಲ್ಲಾ ಮುಗಿದಿದೆ ಮಾಧ್ಯಮದ ಮುಂದೆ ಮಾತನಾಡುವುದು ಬೇಡ ಎಂದಿದ್ದರು. ಹಾಗಾದರೆ ಮಾಧ್ಯಮಕ್ಕೆ ಮರೆಮಾಚುವಂತಹ ಕೃತ್ಯ ನಡೆದಿರುವುದಾದರೂ ಏನು..? ನಿಜಕ್ಕೂ ಎಲ್ಲರೂ ಮುಚ್ಚಿಡುತ್ತಿರುವುದು ಯಾವುದನ್ನ..? ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ನಡೆದ ಹೈಡ್ರಾಮಾ ಯಾವುದು..? ಪ್ರಕರಣ ದಾಖಲಿಸಲು ಆದೇಶಿಸಬೇಕಾದ ಡಿವೈಎಸ್ಪಿ ಮಧ್ಯಸ್ಥಿಕೆ ವಹಿಸಿದ್ದು ಯಾವ ಕಾರಣಕ್ಕೆ..? ವೈದ್ಯರ ಜಾತಿಬಲ ಕೆಲಸ ಮಾಡಿತೇ..? ಟಿಹೆಚ್‍ಎಸ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಪ್ರಾಭಲ್ಯ ಕೆಲಸಮಾಡಿತೇ..? ಕೋಲಾರ ಡಿವೈಎಸ್ಪಿ ಗೆ ವೈದ್ಯರು ಸಹೋದರರೆಂದು ರಕ್ಷಣೆ ಮಾಡಿದರೇ..? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿವೆ.
ರಾಜಕೀಯ ಮುಖಂಡರು, ಪೊಲೀಸರು ಹಾಗೂ ವೈದ್ಯರ ರಿಂದ ಪೋಷಕರನ್ನ ಮನವೊಲಿಸಿ ಸಂಧಾನ ಯತ್ನ ನಡೆಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲಿಸರು ಎರಡು ಆಸ್ಪತ್ರೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.