ತುಮಕೂರು :
ಕೋವಿಡ್-19ನಿಂದ ರಂಗಭೂಮಿ ಸೇರಿದಂತೆ ಎಲ್ಲಾ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಆದೇಶಿಸಿದ್ದು, ಕೂಡಲೇ ಮನರಂಜನಾ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಿ ಪುನಃ ರಂಗ ಚಟುವಟಿಕೆಗಳು ನಡೆಯಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ನಾಟಕ ಅಕಾಡೆಮಿ ಸದಸ್ಯರು, ರಂಗಭೂಮಿ ಕಲಾವಿದರು, ಆರ್ಕೆಸ್ಟ್ರಾ ಕಲಾವಿದರು ಸೇರಿದಂತೆ ವಿವಿಧ ಪ್ರಕಾರಗಳ ಕಲಾವಿದರು ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಟಕ ಅಕಾಡೆಮಿ ಸದಸ್ಯರಾದ ಸದಾಶಿವಯ್ಯ, ಜಿಲ್ಲೆಯ ಪೌರಾಣಿಕ ರಂಗಭೂಮಿ ಕಲಾವಿ ದರು ಆರ್ಕೆಸ್ಟ್ರಾ ಹಾಗೂ ಸುಗಮ ಸಂಗೀತ ಕಲಾವಿದರು, ಸಾಮಾಜಿಕ ನಾಟಕ ಹಾಗೂ ಹವ್ಯಾಸಿ ವೃತ್ತಿ ರಂಗಭೂಮಿ ಕಲಾವಿದರು, ಮಹಿಳಾ ಕಲಾವಿದರು, ಡ್ರಾಮಾ ಸೀನರಿ ಮಾಲೀಕರು, ಹಾರ್ಮೋನಿಯಂ ಮಾಸ್ಟರ್‍ಗಳು, ಪಕ್ಕವಾದ್ಯಗಾರರು, ಡ್ರಾಮಾ ಸೀನರಿ ಮಾಲೀಕರು ಹಾಗೂ ಕಾರ್ಮಿಕರು, ಸಾಂಸ್ಕøತಿಕ ಕಲಾಚಟುವಟಿಕೆಗಳ ಕಲಾವಿದರು, ವಾದ್ಯಗಾರರು ಸೇರಿದಂತೆ ಅನೇಕ ರೀತಿಯ ಕಲಾವಿದರು ಕಳೆದ ಒಂದು ವರ್ಷದಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗದೆ ತೀವ್ರ ಸಂಕಷ್ಟದಲ್ಲಿದ್ದು, ಪ್ರಸ್ತುತ ಎರಡು ಮೂರು ತಿಂಗಳುಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಾ ಬಂದಿದ್ದು, ಮತ್ತೆ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಮನರಂಜನಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ತೀವ್ರ ಸಂಕಷ್ಟಕ್ಕೆ ಗುರಿ ಮಾಡಿದಂತಾಗಿದೆ ಎಂದರು.
ಈಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಶಿವಮಹದೇವಯ್ಯ ಮಾತನಾಡಿ, ರಂಗಭೂಮಿ ಕಲೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ಕಳೆದ 1 ವರ್ಷದಿಂದ ಕೋವಿಡ್-19 ಕಾರಣದಿಂದ ಜೀವನ ನಿರ್ವಹಣೆ ಮಾಡಲು ತುಂಬಾ ಕಷ್ಟವಾಗಿದೆ. ಪ್ರಸ್ತುತ ಜನವರಿಯಿಂದ ಅಲ್ಲೊಂದು ಇಲ್ಲೊಂದು ರಂಗಚಟುವಟಿಕೆಗಳು ಪ್ರಾರಂಭ ವಾಗಿ ನಮ್ಮ ಜೀವನ ಯಥಾ ಸ್ಥಿತಿಗೆ ಬರುತ್ತಿದೆ ಎಂಬ ಆಶಾಭಾವನೆ ಹೊಂದಿದ್ದೆವು, ಆದರೆ ಈಗ ಏಕಾಏಕಿ ಮನರಂಜನಾ ಕಾರ್ಯಕ್ರಮಗಳು ಹಾಗೂ ರಂಗ ಚಟುವಟಿಕೆಗಳು ನಡೆಯದಂತೆ ಜಿಲ್ಲಾಧಿಕಾರಿಗಳು ಆದೇ ಶಿಸಿರುವುದರಿಂದ ರಂಗ ಚಟುವಟಿಕೆಗಳನ್ನೇ ನಂಬಿ ಜಿಲ್ಲೆಯಾದ್ಯಂತ ನಾಲ್ಕು ಸಾವಿರ ಕುಟುಂಬಗಳು ಬೀದಿಪಾಲಾಗಿವೆ ಎಂದು ಹೇಳಿದರು. ನಾಟಕ ಅಕಾಡೆಮಿ ಮಾಜಿ ಸದಸ್ಯ ಮೈಲಾರಪ್ಪ ಮಾತನಾಡಿ, ನಮ್ಮ ಕುಟುಂಬದ ಜೀವನ ನಿರ್ವಹಣೆಗೆ ನಾವು ರಂಗ ಕಲೆಯನ್ನೇ ನಂಬಿ ಅದರಿಂದ ಬರುವ ಸಂಪಾದನೆಯಿಂದ ಜೀವನ ಸಾಗಿಸುತ್ತಿದ್ದೇವೆ. ಆದರೆ ಕೋವಿಡ್-19 ಕಾರಣದಿಂದ ರಂಗಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಯಥಾವತ್ತಾಗಿ ರಂಗಚಟುವಟಿಕೆಗಳು ನಡೆದರೆ ನಾವು ಸಮಾಜದಲ್ಲಿ ಧೈರ್ಯದಿಂದ ಜೀವನ ನಿರ್ವಹಣೆ ಮಾಡಬಹುದು. ಕೂಡಲೇ ಮನರಂಜನಾ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಿ, ರಂಗ ಚಟುವಟಿಕೆಗಳು ಯಥಾ ಪ್ರಕಾರ ನಡೆಯಲು ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಎಲ್ಲಾ ಪ್ರಕಾರಗಳ ರಂಗಚಟುವಟಿಕೆಗಳು ಪ್ರಾರಂಭವಾಗಲು ಅನುಮತಿ ಕೊಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಕಾರ್ಯದರ್ಶಿ ವೈ.ಎನ್.ಶಿವಣ್ಣ, ಸ್ವಾಂದೇನಹಳ್ಳಿ ಸಿದ್ಧರಾಜು, ಮಹಿಳಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷೆ ಮಂಜುಳಾ, ತಾರಾ, ಆರ್ಕೆಸ್ಟ್ರಾ ಸಂಘದ ಅಧ್ಯಕ್ಷ ಶಂಕರ್, ಗೌರವಾಧ್ಯಕ್ಷ ಶ್ರೀನಿವಾಸ್, ವಾದ್ಯಗಾರರ ಸಂಘದ ಅಧ್ಯಕ್ಷ ಗುಬ್ಬಿರಾಜು, ಡ್ರಾಮಾ ಸೀನರಿ ಮಾಲೀಕರಾದ ಬಿ.ವಿ.ಉದಯ್‍ಕುಮಾರ್ ಭೀಮಸಂದ್ರ ವಸಂತಕುಮಾರ್, ಮಂಜುನಾಥ್ ಪೆರಮ ನಹಳ್ಳಿ, ಕೊಡಿಗಿಹಳ್ಳಿ ಸೀನ್ಸ್ ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.