ಹುಳಿಯಾರು:
ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ 3 ವರ್ಷಗಳ ನಂತರ ಮೊದಲ ಬಾರಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಮತದಾರರು ಯಾವ ಪಕ್ಷಕ್ಕೂ ಬಹುಮತ ನೀಡದೆ ಅತಂತ್ರ ಪಂಚಾಯ್ತಿಯ ತೀರ್ಪು ನೀಡಿದ್ದಾರೆ. ಗೆದ್ದಿರುವವರಲ್ಲಿ 8 ಮಂದಿ ಹೊಸಬರು ಹಾಗೂ 8 ಮಂದಿ ಹಳಬರು ಗೆಲುವು ಸಾಧಿಸಿದ್ದಾರೆ.
ಹುಳಿಯಾರು ಪಂಚಾಯ್ತಿ ಚುನಾವಣೆಯನ್ನು 3 ಪಕ್ಷಗಳ ಮುಖಂಡರ ಜೊತೆ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಬಿ ಫಾರಂ ಹಂಚಿಕೆಯಿಂದ ಆರಂಭವಾದ ಜಿದ್ದಾಜಿದ್ದಿ ಮತದಾನದ ಕೊನೆಯವರೆವಿಗೂ ನಡೆಯಿತು. ಆದರೆ ಮತದಾರರು 6 ಕಡೆ ಬಿಜೆಪಿ, 5 ಕಡೆ ಕಾಂಗ್ರೆಸ್, 3 ಕಡೆ ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರರನ್ನು ಗೆಲ್ಲಿಸಿ ಅಧ್ಯಕ್ಷ ಗಾದಿಗೂ ಪೈಪೋಟಿ ಬಾಕಿ ಉಳಿಸಿದ್ದಾರೆ.
ಬಿಜೆಪಿ ಪಂಚಾಯ್ತಿ ಅಧಿಕಾರ ಹಿಡಿಯಲೆಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅನಾರೋಗ್ಯದ ನಡುವೆಯೂ ಪ್ರತಿ ವಾರ್ಡ್‍ನಲ್ಲಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಕೂಡ ಪ್ರಚಾರದಲ್ಲಿ ಹಿಂದೆ ಬೀಳದೆ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಎಂ. ರೇವಣ್ಣ, ಮಾಜಿ ಶಾಸಕ ರಾಜಣ್ಣ ಸೇರಿದಂತೆ ಘಟಾನುಘಟಿಗಳನ್ನು ಕರೆತಂದು ಪ್ರಚಾರ ಮಾಡಿತ್ತು. ಜೆಡಿಎಸ್‍ನ ಸಿ.ಬಿ.ಸುರೇಶ್‍ಬಾಬು, ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ವಾರಗಟ್ಟಲೆ ತಮ್ಮತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದರು. ಆದರೆ ಯಾವ ನಾಯಕರೂ ಮೀಸೆ ತಿರುವದಂತಹ ತೀರ್ಪನ್ನು ಮತದಾರರು ನೀಡಿದ್ದಾರೆ. ಚುನಾವಣಾ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರುಗಳಿಗೆ ಬಣಗಳನ್ನು ಬಿಟ್ಟು ಒಗ್ಗಟ್ಟಾಗಿ ಎಂಬ ಸಂದೇಶವಿದೆ. ಜೆಡಿಎಸ್‍ನ ಸಿ.ಬಿ.ಸುರೇಶ್‍ಬಾಬು ಅವರಿಗೆ ಮತದಾರರು ತಮ್ಮ ತೆಕ್ಕೆಯಿಂದ ಹೊರ ಹೋಗುತ್ತಿದ್ದಾರೆನ್ನುವ ಎಚ್ಚರಿಕೆಯಿದೆ. ಅವರ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. 16 ವಾರ್ಡ್‍ಗಳಲ್ಲಿ 8 ಮಂದಿ ಹಳಬರು, 8 ಮಂದಿ ಹೊಸಬರು ಗೆದ್ದಿದ್ದಾರೆ. ಗೆದ್ದವರಲ್ಲಿ ಬಿಬಿಫಾತೀಮಾ, ದಸ್ತುಗಿರಿಸಾಬ್, ರತ್ನಮ್ಮ ರೇವಣ್ಣ, ಎನ್.ಹೇಮಂತ್ ಕುಮಾರ್, ಚಂದ್ರಶೇಖರ ರಾವ್, ಎಸ್‍ಆರ್‍ಎಸ್ ದಯಾನಂದ್, ಸೈಯದ್ ಜಹೀರ್, ಪ್ರೀತಿ ರಾಘವೇಂದ್ರ ಹಳಬರಾಗಿದ್ದಾರೆ. ಎನ್.ಎನ್.ಕಿರಣ್, ಸಿದ್ದಿಕ್, ರಾಜುಬಡಗಿ, ಜುಬೇರ್, ಕಾವ್ಯರಾಣಿ, ಮಂಜನಾಯ್ಕ, ಸಂಧ್ಯ, ಶೃತಿ ಇವರುಗಳು ಹೊಸ ಮುಖಗಳಾಗಿವೆ.