ತುಮಕೂರು  : 

      ಜಿಲ್ಲೆಯ ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡ ಕುಡಿಯುವ ನೀರು ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಹಾಗೂ ಗಿಡ-ಮರ ಬೆಳೆಗಳಿಗೆ ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಬಿಕ್ಕೆಗುಡ್ಡ ಕುಡಿಯುವ ನೀರಿನ ಯೋಜನೆಯ ಸಂಬಂಧ ಆ ಭಾಗದ ರೈತರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರಂಭದಲ್ಲಿ ತೆರೆದ ಕಾಲುವೆ ಮೂಲಕ ನೀರು ಹರಿಸಲು 15 ಮೀಟರ್ ಭೂ-ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಈಗ ಪೈಪ್ ಲೈನ್ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ 6 ಮೀಟರ್ ಭೂಮಿಯನ್ನು ಮಾತ್ರ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

      ನೀರು ಹರಿಸುವ ಪೈಪ್‍ಲೈನ್ ಕಾಮಗಾರಿ ವೇಳೆ ಜಮೀನಿನಲ್ಲಿರುವ ಗಿಡ-ಮರ, ಬೆಳೆಗಳಿಗೆ ಹಾನಿಯುಂಟಾದರೆ ಮಾರ್ಗಸೂಚಿಯನ್ವಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಿಗಧಿಪಡಿಸಿದ ದರದಲ್ಲಿ ಹೆಚ್ಚಿನ ಪರಿಹಾರ ಕೊಡಿಸಲಾಗುವುದು. ಭೂ-ಸ್ವಾಧೀನಕ್ಕೆ ರೈತರು ಸಮ್ಮತಿ ಸೂಚಿಸಿದರೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಇಲ್ಲದಿದ್ದರೆ ಸ್ವಾಧೀನ ಪ್ರಕ್ರಿಯೆಯಂತೆಯೇ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.

     ಈ ಪ್ರದೇಶದಲ್ಲಿ ಅಡಿಕೆ, ತೆಂಗಿನ ತೋಟಗಳು ಸಮೃದ್ಧವಾಗಿವೆ. ನಾನು ಸ್ಥಳ ಪರಿಶೀಲನೆ ಮಾಡಿದ್ದೇನೆ ಯೋಜನೆಯಿಂದ ಬಾಧಿತವಾಗುವ ಗಿಡ-ಮರ ಬೆಳೆಗಳಿಗೆ ಹೆಚ್ಚಿನ ಪರಿಹಾರ ಕಲ್ಪಿಸಲಾಗುವುದು ಅಲ್ಲದೇ ಪಪ್ಪಾಯಿ(ಪರಂಗಿ) ಮತ್ತು ಬಾಳೆ ಬೆಳೆಗಳಿಗೂ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಆ ಭಾಗದ ಜನರ ಅನುಕೂಲಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಹಾಗಾಗಿ ರೈತರು ಇದಕ್ಕೆ ಸಮ್ಮತಿ ನೀಡಿ ಎಲ್ಲರೂ ಸಹಮತ ತೋರಬೇಕು ಎಂದು ಸಚಿವರು ಮನವಿ ಮಾಡಿದರು.

      ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮಾತನಾಡಿ, ಬಿಕ್ಕೆಗುಡ್ಡ ಪ್ರದೇಶದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಪಪ್ಪಾಯಿ ಹಾಗೂ ಬಾಳೆ ಬೆಳೆಗಳಿಗೂ ಸೆಕ್ಷನ್ 2ರಂತೆ ದರ ನಿಗದಿ ಮಾಡಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

     ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಜಯರಾಮ್, ಜಿಲ್ಲಾ ಪೊಲೀಸ್ ವರಿ ಧಿಕಾರಿ ಡಾ. ವಂಶಿಕೃಷ್ಣ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

 

(Visited 43 times, 1 visits today)