ತುಮಕೂರು :  

      ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಬದುಕಿಗೆ ಬೆಳಕಾಗಿದ್ದ ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 114ನೇ ಜನ್ಮ ಜಯಂತಿಯನ್ನು ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಅತ್ಯಂತ ಸರಳವಾಗಿ ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.

      ಮಹಾಮಾರಿ ಕೊರೊನಾ 2ನೇ ಅಲೆ ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಲಿಂಗೈಕ್ಯ ಶ್ರೀಗಳ 114ನೇ ಜನ್ಮ ಜಯಂತಿ ಅದ್ದೂರಿ ಆಚರಣೆ ಇಲ್ಲದೆ ಎಂದಿನಂತೆ ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಮುಂಜಾನೆಯೇ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಇಷ್ಟಲಿಂಗ ಪೂಜೆ ನೆರವೇರಿಸಿ ಶ್ರೀಗಳ ಗದ್ದುಗೆಗೆ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

      ಶ್ರೀಮಠದ ರುದ್ರಾಕ್ಷಿ ಮಂಟಪದಲ್ಲಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕಂಚಿನ ಪುತ್ಥಳಿ ಮೆರವಣಿಗೆಯು ಗದ್ದುಗೆ ಮಂದಿರದ ಮುಂಭಾಗದಿಂದ ಪ್ರಾರಂಭವಾಗಿ ವಸ್ತು ಪ್ರದರ್ಶನದ ಆವರಣದವರೆಗೆ ನಡೆಯಿತು. ಮೆರವಣಿಗೆ ಸಾಗಿದುದ್ದಕ್ಕೂ ವೀರಗಾಸೆ, ನಂದಿಧ್ವಜ, ಜವಳಿ ಕುಣಿತ, ಡೊಳ್ಳು ಕುಣಿತ ಬ್ಯಾಂಡ್ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.

     ಮೆರವಣಿಗೆಯಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು ಪಾಲ್ಗೊಂಡು ಹಿರಿಯ ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.

      ಕೊರೊನಾ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಶ್ರೀಗಳ 114ನೇ ಜಯಂತ್ಯೋತ್ಸವನ್ನು ಆಡಂಬರ ಇಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಿದ್ದರಿಂದ ಭಕ್ತರ ಸಂಖ್ಯೆಯೂ ವಿರಳವಾಗಿತ್ತು. ಆದರೆ ಶ್ರೀಮಠಕ್ಕೆ ಆಗಮಿಸಿದ ಭಕ್ತರಿಗಾಗಿ ಪೂಜ್ಯರ ಬಯಕೆಯಂತೆ ಚಿತ್ರಾನ್ನ, ಪಾಯಸ, ಮೈಸೂರು ಪಾಕ್ ಸೇರಿದಂತೆ ವಿವಿಧ ಬಗೆಯ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ಶ್ರೀಮಠದ ಮಕ್ಕಳು ಪ್ರಸಾದ ಸ್ವೀಕರಿಸುವ ಸ್ಥಳದಲ್ಲಿಯೇ ಭಕ್ತರಿಗೂ ಪ್ರಸಾದ ವಿನಿಯೋಗಿಸಲಾಯಿತು.

     ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸಿ ಪೂಜ್ಯರ 114ನೇ ಜಯಂತ್ಯೋತ್ಸವವನ್ನು ಸಮಾರಂಭಗಳಿಲ್ಲದೆ ಸರಳವಾಗಿ ಆಚರಿಸಿದ್ದೇವೆ ಎಂದರು. 3 ವರ್ಷಗಳಿಂದ ಪೂಜ್ಯರ ಭೌತಿಕ ದರ್ಶನ ಇಲ್ಲದಿದ್ದರೂ ಸಹ ಅವರ ಭಾವನಾತ್ಮಕವಾದ ಭಾವನೆಯ ಭಕ್ತಿಯೊಂದಿಗೆ ಸ್ಮರಣೆ ಮಾಡುವ ಮೂಲಕ ಬದುಕನ್ನು ಹಸನು ಮಾಡಿಕೊಳ್ಳೋಣ ಎಂದರು.
2ನೇ ಪುಟಕ್ಕೆ

(Visited 13 times, 1 visits today)