ತುಮಕೂರು : 

      ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅನರ್ಹರು ಹೊಂದಿರುವ ಅಂತ್ಯೋದಯ, ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಗಳನ್ನು ಹಿಂದಿರುಗಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದ್ದಾರೆ.

       ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳು ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆಯನ್ನು ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‍ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶ ಹೊರತುಪಡಿಸಿ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ, ಹೊಂದಿರುವ ಕುಟುಂಬವನ್ನು ಹೊರತುಪಡಿಸಿ 4 ಚಕ್ರದ ವಾಹನವನ್ನು ಹೊಂದಿರುವ ಕುಟುಂಬಗಳು, ವಾರ್ಷಿಕ 1.20 ಲಕ್ಷ ರೂ.ಗಳಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಅಂತ್ಯೋದಯ, ಆದ್ಯತಾ ಪಡಿತರ ಚೀಟಿಗಳನ್ನು ಪಡೆದುಕೊಂಡಿರಬಾರದು.

         2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 640081 ಕುಟುಂಬಗಳು ದಾಖಲಾಗಿದ್ದು, 2021ರ ಮಾ. ಮಾಹೆಯವರೆಗೆ 49389 ಅಂತ್ಯೋದಯ ಅನ್ನ, 612331 ಆದ್ಯ ತಾ ಸೇರಿ ಒಟ್ಟು 661720 ಕುಟುಂಬಗಳಿಗೆ ಆದ್ಯತಾ ಪಡಿತರ ಚೀಟಿ ಹಾಗೂ 54702 ಕುಟುಂಬಗಳಿಗೆ ಆದ್ಯತೇತರ ಪಡಿತರ ಚೀಟಿ ನೀಡಲಾಗಿದೆ. ಆರ್ಥಿಕವಾಗಿ ಸಬಲರು ಮತ್ತು ಇತರೆ ಅನರ್ಹರರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಪದೇ ಪದೇ ಮನವಿ ಮಾಡಿದ್ದು, ಈ ಮನವಿ ಕೆಲವರು ಸ್ಪಂದಿಸಿ ಆದ್ಯತಾ ಪಡಿತರ ಚೀಟಿ ಹಿಂದಿರುಗಿಸಿ, ಆದ್ಯ ತೇತರ ಪಡಿತರ ಚೀಟಿಗಳನ್ನು ಪಡೆದಿದ್ದಾರೆ. ಸರ್ಕಾರ ನಿಗಧಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಆದ್ಯತಾ ಪಡಿತರ ಚೀಟಿ ಹೊಂದಿರುವವರು ತಕ್ಷಣವೇ ತಾಲೂಕಿನ ತಹಶೀಲ್ದಾರ್‍ರರಿಗೆ ಒಪ್ಪಿಸಿ ಆದ್ಯತೇತರ ಪಡಿತರ ಚೀಟಿ ಪಡೆಯಬೇಕು. ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ 1977ರ ಹಾಗೂ ಐಪಿಸಿ ಕಲಂ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು.

 

(Visited 36 times, 1 visits today)