ಶಿರಾ:
ಮದುವೆಗೆ ಒಪ್ಪಲಿಲ್ಲವೆಂಬ ಕಾರಣಕ್ಕಾಗಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಶಿರಾ ತಾಲ್ಲೂಕಿನ ದೊಡ್ಡಗುಲಾ ಸಮೀಪದ ರತ್ನಸಂದ್ರ ಗೊಲ್ಲರಹಟ್ಟಿಯ ನಿವಾಸಿ 17 ವರ್ಷದ ಕಾವ್ಯ ಎಂಬಾಕೆಯನ್ನು ಅದೇ ಗ್ರಾಮದ ಯುವಕ ಈರಣ್ಣ ಬರ್ಬರವಾಗಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಕಾವ್ಯಳನ್ನು ಪ್ರೀತಿಸುವಂತೆ ಪ್ರತಿನಿತ್ಯ ಬೆಂಬಿಡದೇ ಕಾಡುತ್ತಿದ್ದು ಆಕೆಯನ್ನು ಹಿಂಬಾಲಿಸುತ್ತಿದ್ದು ತನ್ನನ್ನೇ ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದ ಈರಣ್ಣ ಯುವತಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಹಿಂದೆ ಬಿದ್ದು ತನ್ನನ್ನೇ ಪ್ರೀತಿಸು, ನಾನು ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಲಾರೆ, ನಿನ್ನನ್ನು ಮನಸಾರೆ ಇಷ್ಟ ಪಟ್ಟಿದ್ದೇನೆ, ಮದುವೆಯಾದರೆ ನಿನ್ನನ್ನು ಮಾತ್ರ ಎಂದು ಸಾಕಷ್ಟು ಬಾರಿ ಯುವತಿ ಎದುರು ಗೋಗರೆದಿದ್ದ ಎನ್ನಲಾಗಿದೆ.
ಆದರೆ ಯುವತಿ ಈರಣ್ಣ ನ ಪ್ರೀತಿಯನ್ನು ಒಪ್ಪಿಕೊಳ್ಳಲಾರದೆ ತಿರಸ್ಕರಿಸಲಾರದೇ ತನ್ನ ಸ್ನೇಹಿತರು ಮತ್ತು ಪೋಷಕರಿಗೆ ಈರಣ್ಣನ ಬೇಡಿಕೆಗಳ ವಿಚಾರ ಹೇಳಿಕೊಂಡಿದ್ದಳು ಎನ್ನಲಾಗುತ್ತಿದೆ. ಯುವತಿಯನ್ನು ಮನಸಾರೆ ಇಷ್ಟಪಟ್ಟು, ಅವಳೇ ತನ್ನ ಸರ್ವಸ್ವ ಎಂಬ ರೀತಿಯಲ್ಲಿ ಹೇಳಿಕೊಂಡು ಅಡ್ಡಾಡುತ್ತಿದ್ದ ಭಗ್ನಪ್ರೇಮಿ ಈರಣ್ಣ, ಅವಳಿಲ್ಲದ ಬದುಕು ನನ್ನದಲ್ಲ ಎಂಬ ರೀತಿಯಲ್ಲಿ ತನ್ನ ಗೆಳೆಯರೊಂದಿಗೆ ಹೇಳಿಕೊಂಡಿದ್ದ.
ಆದರೆ ಯುವತಿ ಪ್ರೀತಿಯನ್ನು ಒಪ್ಪಿ ತನ್ನೊಪ್ಪಿಗೆಯನ್ನು ಈರಣ್ಣನ ಎದುರು ಒಪ್ಪಿಕೊಳ್ಳದ ಕಾರಣ ಸೋಮವಾರ ಬೆಳಿಗ್ಗೆ ಕಾವ್ಯಳು ಕಾಲೇಜಿಗೆ ಹೋಗುವ ಸಮಯವನ್ನು ಕಾದು ಕುಳಿತು, ಯುವತಿಯನ್ನು ಹಿಂಬಾಲಿಸಿ, ನಡುರಸ್ತೆಯಲ್ಲಿ ಅಡ್ಡಗಟ್ಟಿ ಒಪ್ಪಿಗೆ ಇಲ್ಲದೇ ತಾಳಿ ಕಟ್ಟಲು ಯತ್ನಿಸಿದ್ದು, ಬಲವಂತದಿಂದ ತಾಳಿ ಕಟ್ಟುವುದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಯುವತಿಯ ವಿರುದ್ಧ ಕೋಪಗೊಂಡ ಭಗ್ನಪ್ರೇಮಿ ತನ್ನ ಬಳಿ ಇದ್ದ ಮಚ್ಚಿನಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ ಎನ್ನಲಾಗುತ್ತಿದೆ.
ರಕ್ತದ ಮಡುವಿನಲ್ಲಿ ಅನಾಥವಾಗಿ ಬಿದ್ದಿದ್ದ ಕಾವ್ಯಳ ಮೃತ ದೇಹವನ್ನು ಕಂಡ ಆಕೆಯ ಪೋಷಕರು ರೋಧನ ಗೈಯುತ್ತಿದ್ದು, ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.