ಹುಳಿಯಾರು :
2020-2021 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಅವಧಿಯನ್ನು ಏ.30 ರ ವರೆವಿಗೆ ವಿಸ್ತರಿಸಲಾಗಿದೆ ಎಂದು ಖರೀದಿ ಅಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.
ಈ ಹಿಂದೆ ನೊಂದಣಿ ಅವಧಿಯಲ್ಲಿ 4501 ರೈತರು ನೊಂದಾಯಿಸಿದ್ದರು. ಮಾರ್ಚ್ 31 ರ ವರೆವಿಗೆ 4230 ರೈತರಿಂದ 98,029 ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು. ನೊಂದಾಯಿಸಿದ್ದವರ ಪೈಕಿ ಇನ್ನೂ 271 ರೈತರಿಂದ ರಾಗಿ ಖರೀದಿ ಬಾಕಿ ಉಳಿದಿದೆ. ಇಂತಹ ರೈತರಿಗೆ ಖರೀದಿ ಅವಧಿ ವಿಸ್ತರಿಸಿರುವುದು ಸುವರ್ಣಾವಕಾಶವಾಗಿದೆ ಎಂದರು.
ಫೆ.23 ರ ವರೆವಿಗೆ ರೈತರಿಂದ ಖರೀದಿ ಮಾಡಿರುವ ರಾಗಿಯ ಬಾಬ್ತು ಹಣವನ್ನು ರೈತರ ಖಾತೆಗೆ ಈಗಾಗಲೇ ಜಮೆ ಮಾಡಲಾಗಿದೆ. ಇದರಲ್ಲಿ ಐವತಕ್ಕೂ ಹೆಚ್ಚು ಮಂದಿಯ ಬ್ಯಾಂಕ್‍ನಲ್ಲಿ ಆಧಾರ್ ಲಿಂಕ್ ಆಗದ ಹಾಗೂ ಹೆಸರು ಮಿಸ್ ಮ್ಯಾಚ್ ಆಗಿರುವ ಕಾರಣದಿಂದ ಹಣ ಪಾವತಿ ತಡೆಹಿಡಿಯಲಾಗಿದೆ. ಅಂತಹವರು ತಕ್ಷಣ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.ಏ.5 ರ ವರೆವಿಗೆ ಹೊಸ ನೊಂದಣಿಗೂ ಸರ್ಕಾರ ಅವಕಾಶ ಕೊಟ್ಟಿತ್ತು. ಆದರೆ ಆನ್‍ಲೈನ್‍ನಲ್ಲಿ ರಿಜಿಸ್ಟ್ರೀಷನ್ ಓಪನ್ ಆಗದೆ 2 ದಿನಗಳ ಕಾಲ ತೊಂದರೆಯಾಗಿತ್ತು. ಈಗ ನೊಂದಣಿ ತೆಗೆದುಕೊಳ್ಳುತ್ತಿದ್ದು ಏಳೆಂಟು ಮಂದಿ ರೈತರು ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದರಲ್ಲದೆ ರೈತರು ಕೊನೆಯ ದಿನಾಂಕದವರೆವಿಗೆ ಕಾಯದೆ ಈಗಿನಿಂದಲೇ ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿ ತರುವಂತೆ ಶಿವಶಂಕರ್ ಮನವಿ ಮಾಡಿದ್ದಾರೆ.