ಹುಳಿಯಾರು:
ಸ್ಪಷ್ಟ ಬಹುಮತ ಯಾವ ಪಕ್ಷಕ್ಕೂ ಸಿಗದೆ ಅತಂತ್ರವಾಗಿದ್ದ ಹುಳಿಯಾರು ಪಟ್ಟಣ ಪಂಚಾಯ್ತಿಯ ಗಾದಿ ಇಬ್ಬರೂ ಪಕ್ಷೇತರರು ಬಿಜೆಪಿಗೆ ಸೇರುವ ಮೂಲಕ ಬಿಜೆಪಿಗೆ ಮತ್ತೊಷ್ಟು ಸನ್ನಿಹಿತವಾಗಿದೆ.
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 5, ಜೆಡಿಎಸ್ 3 ಹಾಗೂ ಪಕ್ಷೇತರರು ಇಬ್ಬರು ಗೆದ್ದಿದ್ದರು. ಪಂಚಾಯ್ತಿ ಗಾದಿ ಹಿಡಿಯಲು 9 ಸದಸ್ಯರ ಸಂಖ್ಯಾಬಲ ಅತ್ಯಗತ್ಯ. ಹಾಗಾಗಿ ಪಕ್ಷೇತರರನ್ನು ಸೆಳೆದು ಅಧಿಕಾರ ಹಿಡಿಯಲು ಮೂರು ಪಕ್ಷಗಳೂ ತೆರೆಮರೆಯ ಕಸರತ್ತು ನಡೆಸುತ್ತಿದ್ದವು.
ಆದರೆ ಇತ್ತೀಚೆಗಷ್ಟೆ ಪಕ್ಷೇತರ ಸದಸ್ಯೆ ಶೃತಿಸನತ್ ಅವರು ಜೆಸಿಎಂ ಸಮ್ಮುಖದಲ್ಲಿ ಬಿಜೆಪಿ ಸೇರಿ ಬಿಜೆಪಿ ಗದ್ದುಗೆ ಹಿಡಿಯುವ ದಾರಿ ತರೆದರು. ಈಗ ಮತ್ತೊಬ್ಬ ಪಕ್ಷೇತರ ಸದಸ್ಯ ಸೈಯದ್ ಜಹೀರ್ ಸಾಬ್ ಅವರು ಬಿಜೆಪಿ ಸೇರಿ ಅಧಿಕಾರಿ ಹಿಡಿಯುವ ದಾರಿ ಸುಗಮವಾಗಿಸಿದರು.
ಪಕ್ಷೇತರರ ಸೇರ್ಪಡೆಯಿಂದ ಬಿಜೆಪಿ 8 ಸಂಖ್ಯಾಬಲ ಹೆಚ್ಚಿಸಿಕೊಂಡಿದ್ದು ಎಂಎಲ್‍ಎ ಹಾಗೂ ಎಂಪಿ ಮತಗಳು ಸೇರಿ ಸುಲಭವಾಗಿ ಅಧಿಕಾರಕ್ಕೆ ಬರುತ್ತದೆ. ಆದರೆ ಪಟ್ಟಣ ಪಂಚಾಯ್ತಿ ಮೊದಲ ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾರು ಎನ್ನುವ ಕುತೂಹಲ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಅಧ್ಯಕ್ಷ ಸ್ಥಾನ ಜನರಲ್‍ಗೆ ಮೀಸಲಾಗಿದ್ದು ಹೇಮಂತ್, ಕೆಎಂಎಲ್ ಕಿರಣ್, ಬಿಬಿಫಾತೀಮಾ ಮೂವರೂ ರೇಸ್‍ನಲ್ಲಿದ್ದಾರೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಪಕ್ಷೇತರರಾಗಿ ಗೆದ್ದು ಬಿಜೆಪಿ ಸೇರಿ ಅಧಿಕಾರ ಹಿಡಿಯುವ ಹಾದಿ ಸುಗಮವಾಗಿಸಿದ ಶೃತಿಸನತ್ ಅವರಿಗೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದರ ಜೊತೆಗೆ ಅಧಿಕಾರದ ಪಾಲುದಾರರಾಗಿ ಉಪಾಧ್ಯಕ್ಷ ಸ್ಥಾನದ ಕನಸು ಜೆಡಿಎಸ್ ಕಾಣುತ್ತಿದೆ. ಬಿಜೆಪಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದೋ ಅಥವಾ ಸ್ವಂತ ಶಕ್ತಿ ಬಲದಿಂದ ಅಧಿಕಾರ ಹಿಡಿಯುವುದೋ ಕಾದು ನೋಡಬೇಕಿದೆ.