ಬೆಂಗಳೂರು:
ಪರೀಕ್ಷಾ ಕೇಂದ್ರಗಳಲ್ಲಿನ ನಕಲು ತಡೆಯುವ ಉದ್ದೇಶದಿಂದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವೇಳೆ ಕೈ ಗಡಿಯಾರ ಕಟ್ಟಿಕೊಂಡು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವುದಕ್ಕೆ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಷೇಧ ಹೇರಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಿಂದ ಈ ನಿಯಮ ಅನ್ವಯವಾಗಲಿದ್ದು, ಪರ್ಯಾಯ ಮಾರ್ಗವಾಗಿ ಪರೀಕ್ಷಾ ಕೇಂದ್ರಗಳಲ್ಲೆ ಗೋಡೆ ಗಡಿಯಾರ ಹಾಕಲು ನಿರ್ಧರಿಸಿದೆ.
ಇದರಿಂದಾಗಿ ವಿದ್ಯಾರ್ಥಿಗಳು ಕೈ ಗಡಿಯಾರ ಬಿಟ್ಟು ಪರೀಕ್ಷಾ ಕೊಠಡಿಗೆ ತೆರಳಬೇಕು. ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಸಿಇಟಿಯಲ್ಲಿ ಇದನ್ನು ಜಾರಿಗೆ ತರಲಾಗಿತ್ತು. ಕೆಇಎ ತನ್ನ ಹಣದಿಂದಲೇ ಪರೀಕ್ಷಾ ಕೇಂದ್ರಗಳಿಗೆ ಗೋಡೆ ಗಡಿಯಾರ ಖರೀದಿಸಿ ಹಾಕಿತ್ತು.
ಪರೀಕ್ಷಾ ಸಮಯದಲ್ಲಿ ಗಡಿಯಾರ ಇಲ್ಲದಿದ್ದರೆ ನಾವು ಸಮಯದ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಡಿಜಿಟಲ್ ಗಡಿಯಾರಗಳನ್ನು ಬೇಕಾದರೆ ನಿಷೇಧ ಮಾಡಿ. ಸಾಮಾನ್ಯ ವಾಚ್ ಕಟ್ಟಿಕೊಳ್ಳುವವರಿಗೆ ಪ್ರವೇಶ ನೀಡಬೇಕು. ಅಲ್ಲದೆ, ನಕಲು ಮಾಡಲು ಬಳಸುವ ಗಡಿಯಾರಗಳೂ ದುಬಾರಿಯಾಗಿರುತ್ತವೆ. ಅದನ್ನು ಖರೀದಿ ಮಾಡುವುದು ಅಸಾಧ್ಯ. ಹೀಗಾಗಿ, ಶಿಕ್ಷಣ ಇಲಾಖೆಯ ನಿರ್ಧಾರ ಹಿಂಪಡೆಯಬೇಕು ಎಂದು ವಿದ್ಯಾರ್ಥಿ ಮತ್ತು ಪೋಷಕರು ಆಗ್ರಹಿಸಿದ್ದಾರೆ.