ತುಮಕೂರು :
ಎರಡನೇ ಹಂತದ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ವಾರ್ಡ್ ಹಂತದಲ್ಲಿ ಕೋವಿಡ್ ತಪಾಸಣೆ ಮತ್ತು ಸ್ವ್ಯಾಬ್ ಸಂಗ್ರಹ, ಸೇರಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ.
ನಗರದ ಸಿದ್ಧಗಂಗಾ ಬಡಾವಣೆಯ 9ನೇ ಕ್ರಾಸ್, ಸಿದ್ದಗಂಗಾ ಮಹಿಳಾ ಹಾಸ್ಟೆಲ್, ಸೇರಿದಂತೆ 26ನೇ ವಾರ್ಡ್‍ನಲ್ಲಿ ಸಾರ್ವಜನಿಕರಿಗಾಗಿ ಕೋವಿಡ್ ಪರೀಕ್ಷೆ ಮಾಡಿ ಸ್ವ್ಯಾಬ್ ಸಂಗ್ರಹ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಹಾಕುವ ಕಾರ್ಯಕ್ರಮಕ್ಕೆ ಮಹಾಪೌರರಾದ ಕೃಷ್ಣಪ್ಪ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತೆ ರೇಣುಕಾ, ನಗರದಲ್ಲಿ ಪಾಸಿಟಿವ್ ಕೇಸ್‍ಗಳು ಹೆಚ್ಚಾಗುತ್ತಿದೆ ಪಾಲಿಕೆ ವ್ಯಾಪ್ತಿಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆ ಕಡಿಮೆಯಾಗುತ್ತಿದೆ. ಅದ್ದರಿಂದ ವಾರ್ಡ್ ಹಂತದಲ್ಲಿ ಪಾಲಿಕೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಮೊಬೈಲ್ ಆರೋಗ್ಯ ವಾಹನದ ಮೂಲಕ ತಪಾಸಣೆ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ಸೋಂಕಿತರ ಜೊತೆ ಪ್ರಥಮ ಹಾಗೂ ದ್ವೀತಿಯ ಸಂಪರ್ಕದಲ್ಲಿದವರು ತಾವಾಗಿಯೇ ಮಾಹಿತಿ ನೀಡಬೇಕು ಅಂತಹವರಿಗೆ ವಾರ್ಡ್‍ನಲ್ಲಿಯೇ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. 45ವರ್ಷ ಮೇಲ್ಪಟ್ಟ ನಾಗರೀಕರು ಕಡ್ಡಾಯವಾಗಿ ವ್ಯಾಕ್ಸಿನೇಷನ್ ಲಸಿಕೆಯನ್ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಕಿಸಿಕೊಳ್ಳಬೇಕು. 28 ದಿನಗಳ ನಂತರ ದ್ವೀತಿಯ ಹಂತದ ಲಸಿಕೆ ಪಡೆಯಬಹುದು. ಅದ್ದರಿಂದ ವಾರ್ಡ್ ಹಂತದಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಇದರ ಉಲ್ಲಂಘನೆ ಮಾಡಿದವರಿಗೆ ಕಾನೂನು ರೀತಿ ಪಾಲಿಕೆ ವ್ಯಾಪ್ತಿಯಲ್ಲಿ 250. ರೂ.ಗಳು ದಂಡ ವಿಧಿಸಲಾಗುವುದು. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಅನಗತ್ಯ ಸಭೆ, ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೇ ಸಭೆ, ಸಮಾರಂಭ ನಡೆದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡು 5 ರಿಂದ 10 ಸಾವಿರ ರೂ.ಗಳ ವರೆಗೆ ದಂಢವಿಧಿಸಲಾಗುವುದು. ಇದಕ್ಕೇಂದೆ ವಿಶೇಷವಾಗಿ 4 ಮೊಬೈಲ್ ಸ್ಕ್ವಾಡ್ ಸಮಿತಿಗಳನ್ನ ರಚಿಸಲಾಗಿದೆ. ಇವರು ಬೆಳಿಗ್ಗೆ 6 ರಿಂದ ಸಂಜೆ 6ರ ವರಗೆ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಲಿದ್ದಾರೆ. ಎಂದರಲ್ಲದೇ ಮಾಸ್ಕ್ ಧರಿಸದವರನ್ನು ಗುರ್ತಿಸಿ ದಂಡ ವಿಧಿಸುತ್ತಾರೆ. ಅದಕ್ಕಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ನಗರ ಆರೋಗ್ಯಾಧಿಕಾರಿ ಡಾ|| ಮೋಹನ್ ಮಾತನಾಡಿ, ನಗರ ಪ್ರದೇಶದಲ್ಲಿ ಪಾಸಿಟಿವ್ ಕೇಸ್ ಹೆಚ್ಚಾಗುತ್ತಿರುವ ಕಾರಣ ವಾರ್ಡ್ ಹಂತದಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ, 24ನೇ ವಾರ್ಡ್‍ನಲ್ಲಿ ವಿದ್ಯುಕ್ತವಾಗಿ ಸ್ವ್ಯಾಬ್ ಕಲೆಕ್ಷನ್ ಪ್ರಕ್ರಿಯೆ ಆರಂಭವಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿದೆ. ಸೋಂಕಿತರ ಪ್ರಾಥಮಿಕ, ಹಾಗೂ ದ್ವೀತಿಯ ಸಂಪರ್ಕದವರ ಸ್ವ್ಯಾಬ್ ಕಲೆಕ್ಷನ್ ಮಾಡಲಾಗುತ್ತಿದೆ. ಜೊತೆಗೆ ಬಿಪಿ, ಶುಗರ್ ಸೇರಿದಂತೆ ಇನ್ನಿತರ ದೀರ್ಘ ಖಾಯಿಲೆಗಳನ್ನು ಪತ್ತೆ ಮಾಡಲಾಗುತ್ತಿದೆ. ಅಂತಹವರಿಂದಲೂ ಸ್ವ್ಯಾಬ್ ಕಲೆಕ್ಷನ್ ಮಾಡಲಾಗುವುದು. ವಾರ್ಡ್‍ನಲ್ಲಿ 45ವರ್ಷ ಮೇಲ್ಪಟ್ಟವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಲು ತೊಂದರೆಯಾಗದಂತೆ ವಾಸವಿ ಶಾಲೆಯಲ್ಲಿ ವ್ಯಾಕ್ಸಿನೇಷನ್ ನೀಡಲು ಸಿದ್ಧತೆ ಮಾಡಲಾಗಿದೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಮಹಾ ಪೌರರಾದ ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ಸೇರಿದಂತೆ ಪಾಲಿಕೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.