ಹುಳಿಯಾರು: 

      ಹುಳಿಯಾರು ನಾಡಕಚೇರಿಯಲ್ಲಿ ಪ್ರಿಂಟರ್ ಸಮಸ್ಯೆಯಿಂದಾಗಿ ಅರ್ಜಿ ಸೇವೆ ಸ್ಥಗಿತಗೊಳಿಸಲಾಗಿದೆ.

      ಹುಳಿಯಾರು ಹೋಬಳಿಯು ಜಿಲ್ಲೆಯಲ್ಲೇ ಅತೀ ದೊಡ್ಡ ಹೋಬಳಿ ಕೇಂದ್ರವಾಗಿದ್ದು ನಿತ್ಯ ಸಾವಿರಾರು ಮಂದಿ ಹಳ್ಳಿಗಳಿಂದ ಇಲ್ಲಿಗೆ ಬಂದೋಗುತ್ತಾರೆ. ಅಲ್ಲದೆ ಇಲ್ಲಿನ ನಾಡಕಛೇರಿಗೆ ಜಾತಿಆದಾಯ, ಫೌತಿ ಖಾತೆ, ವಂಶವೃಕ್ಷ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ನೂರಾರು ಮಂದಿ ಆಗಮಿಸುತ್ತಾರೆ. ಪಹಣಿ ಹಾಗೂ ಎಂಆರ್ ಪಡೆಯಲೂ ಸಹ ಇಲ್ಲಿಗೆ ಬರುತ್ತಾರೆ.

      ಚುನಾವಣೆ ಸಂದರ್ಭದಲ್ಲಂತೂ ಎಂದಿಗಿಂತಲೂ ಹೆಚ್ಚು ಮಂದಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬರುತ್ತಾರೆ. ಇದು ಇತ್ತೀಚೆಗೆ ನಡೆದ ಗ್ರಾಪಂ ಹಾಗೂ ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಬದಲ್ಲಿ ಸಾಭೀತಾಗಿದೆ. ಹಾಗಾಗಿ ತಾಲೂಕಿನಲ್ಲೇ ಹೆಚ್ಚು ವರ್ಕ್‍ಲೋಡ್ ಇರುವ ಹುಳಿಯಾರು ನಾಡಕಛೇರಿಗೆ ಇಬ್ಬರು ಕಂಪ್ಯೂಟರ್ ಆಪರೇಟರ್ ಹಾಗೂ ಎರಡು ಪ್ರಿಂಟರ್ ಮತ್ತು ಸಿಸ್ಟಮ್‍ಗಳ ಅಗತ್ಯವಿದೆ. ಆದರೆ ಒಬ್ಬರು ಆಪರೇಟರ್ ಕೊಟ್ಟು ಇಲಾಖೆ ಕೈ ಕಟ್ಟಿ ಕುಳಿತಿದೆ.

       ಪರಿಣಾಮ ಕಳೆದ ಮೂರ್ನಲ್ಕು ತಿಂಗಳಲ್ಲಿ ಮೂರ್ನಲ್ಕು ಪ್ರಿಂಟರ್‍ಗಳು ಕೆಟ್ಟು ಅರ್ಜಿ ಪಡೆಯುವ ಸೇವೆಯಲ್ಲಿ ಆಗಿಂದಾಗೆ ವ್ಯತ್ಯಯವಾಗಿದೆ. ಈಗಂತೂ ಇರುವ ಪ್ರಿಂಟರ್‍ಗಳೆಲ್ಲವೂ ಕೆಟ್ಟುಹೋಗಿದ್ದು ರಿಪೇರಿಗೆ ತಾಲೂಕು ಕಛೇರಿಗೆ ಕಳುಹಿಸಿದ್ದರೂ ಇನ್ನೂ ರಿಪೇರಿಯಾಗಿಲ್ಲ. ಪರಿಣಾಮ ಅರ್ಜಿ ಪಡೆಯುವ ಸೇವೆಯಲ್ಲೇ ಸ್ಥಗಿತಗೊಳಿಸಲಾಗಿದೆ. ಈ ವಿಷಯ ತಿಳಿಯದ ಹೋಬಳಿಯ ವಿವಿಧ ಗ್ರಾಮಗಳಿಂದ ಬರುವ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲದೆ ಹಿಂದಿರುಗುತ್ತಿದ್ದಾರೆ. ಅಲ್ಲದೆ ತುರ್ತು ಅಗತ್ಯವಿರುವವರು 22 ಕಿ.ಮೀ.ದೂರವಿರುವ ಚಿಕ್ಕನಾಯಕನಹಳ್ಳಿ ತಾಲೂಕು ಕಛೇರಿಗೆ ಹೋಗುವ ಅನಿವಾರ್ಯತೆ ಸೃಷ್ಠಿಯಾಗಿದೆ. ಅರ್ಜಿ ಸ್ವೀಕರಿಸುವ ಸೇವೆ ಸ್ಥಗಿತವಾಗಿರುವ ಬಗ್ಗೆ ತಿಳಿಯದೆ ಬರುವವರ ಹಣ ಮತ್ತು ಸಮಯ ಎಲ್ಲವೂ ವ್ಯರ್ಥವಾಗುತ್ತಿದೆ. ಹಾಗಾಗಿ ತಕ್ಷಣ ಗುಣಮಟ್ಟದ ಪ್ರಿಂಟರ್ ಕೊಟ್ಟು ಕೆಲಸ ನಿರ್ವಹಿಸುವಂತೆ ಮಾಡುವ ಜೊತೆಗೆ ಇನ್ನೊಬ್ಬರು ಕಂಪ್ಯೂಟರ್ ಆಪರೇಟರ್ ನೀಡಿ ತ್ವರಿತಗತಿಯಲ್ಲಿ ಗ್ರಾಹಕರಿಗೆ ಸೇವೆ ಸಿಗುವಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

(Visited 53 times, 1 visits today)