ತುಮಕೂರು:
ನಗರದ ರೈಲ್ವೆ ನಿಲ್ದಾಣ ರಸ್ತೆಯ ಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿರುವ ಕೋವಿಡ್ ಲಸಿಕೆ ಹಾಕುವ ಕೇಂದ್ರದಲ್ಲಿ 2ನೇ ಹಂತದ ಲಸಿಕೆ ನೀಡುವ ಕಾರ್ಯಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಚಾಲನೆ ನೀಡಿದರು.
ನಗರಪಾಲಿಕೆ, ಆರೋಗ್ಯ ಇಲಾಖೆ ಹಾಗೂ 15ನೇ ವಾರ್ಡಿನ ಕಾರ್ಪೋರೇಟರ್ ಗಿರಿಜಾ ಧನಿಯಕುಮಾರ್ ಅವರ ಒತ್ತಾಸೆಯ ಮೇರೆಗೆ ನಗರದ ಐದಾರು ವಾರ್ಡುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಸಿಕಾ ಕೇಂದ್ರ ಆರಂಭಗೊಂಡಿದ್ದು, 74 ವರ್ಷದ ಸರಸ್ವತಿ ಎಂಬ ಮಹಿಳೆಯೊಬ್ಬರಿಗೆ ಲಸಿಕೆ ನೀಡುವ ಮೂಲಕ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಜಿ.ಬಿ. ಜೋತಿಗಣೇಶ್, ಸಾರ್ವಜನಿಕರ ಹಿತದೃಷ್ಟಿಯಿಂದ ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಜಗದೀಶ್ ಅವರು ಒಂದು ಕೊಠಡಿಯನ್ನು ಲಸಿಕಾ ಕೇಂದ್ರವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.ಆಸ್ಪತ್ರೆಗೆ ಹೋದಾಗ ಕೊಂಚ ಹಿಂಜರಿಕೆಯಾಗುವುದು ಸಹಜ. ಆದರೆ ಇಲ್ಲಿ ಆ ವಾತಾವರಣವಿಲ್ಲ. ಪಾರ್ಕಿಂಗ್‍ಗೂ ಸಾಕಷ್ಟು ಸ್ಥಳಾವಕಾಶವಿದೆ. ಇದು ಐದಾರು ವಾರ್ಡುಗಳಿಗೆ ಕೇಂದ್ರ ಸ್ಥಾನವಾದ ಕಾರಣ ಸುತ್ತಮುತ್ತಲ ನಾಗರಿಕರು, ಅದರಲ್ಲಿಯೂ 45 ವರ್ಷಕ್ಕಿಂತ ಮೇಲ್ಮಟ್ಟ ಎಲ್ಲರೂ ಉಚಿತವಾಗಿ ನೀಡುವ ಕೋರೋನಾ ಲಸಿಕೆ ಪಡೆದು, ನಗರವನ್ನು ಕೊರೋನ ಮುಕ್ತಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ವಾರ್ಡಿನ ಕೌನ್ಸಿಲರ್ ಗಿರಿಜಾ ಧನಿಯಕುಮಾರ್ ಮಾತನಾಡಿ, ಪ್ರಧಾನ ಮಂತ್ರಿಗಳ ಆಶಯದಂತೆ ಈ ಮಹಾಮಾರಿ ಯಿಂದ ದೂರವಾಗಲು ಎಲ್ಲರೂ ಲಸಿಕೆ ಪಡೆದುಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ರೀತಿಯ ಪ್ರಚಾರ ಕಾರ್ಯಗಳನ್ನು ಮಾಡಲಾಗಿದೆ. ಅಲ್ಲದೆ ವಯೋವೃದ್ದರು ಮತ್ತು ಅಶಕ್ತರಿಗಾಗಿ ಉಚಿತ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ದೇಶದ ಅಭಿವೃದ್ದಿಯಲ್ಲಿ ಕೈಜೋಡಿಸುವಂತೆ ಕೋರಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಗದೀಶ, ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೂಶುಷಕಿ ಅಂಜುಮ್, ಕನ್ನಡ ಸೇನೆ ಅಧ್ಯಕ್ಷ ಧನಿಯಕುಮಾರ್ ಇದ್ದರು.