ತುಮಕೂರು:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತವಾಗಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಖಾಸಗಿ ಬಸ್ಸುಗಳು ಕಾರ್ಯಾಚರಣೆ ನಡೆಸುತ್ತಿದ್ದರೂ, ಪ್ರಯಾಣಿಕರಿಗೆ ಸಂಪೂರ್ಣ ತೃಪ್ತಿಕರ ಸೇವೆ ನೀಡಲು ಸಾಧ್ಯವಾಗಿಲ್ಲ.
ಸಾರ್ವಜನಿಕರು ಎಂದಿನಂತೆ ಶಾಲಾ, ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದು, ಸರಕಾರಿ ಬಸ್ಸುಗಳಿಲ್ಲದೆ, ಅವುಗಳ ಸ್ಥಾನದಲ್ಲಿದ್ದ ಬೆರಳೆಣಿಕೆಯ ಖಾಸಗಿ ಬಸ್ಸುಗಳಿಗೆ ಹತ್ತಬೇಕೆ, ಬೇಡವೆ ಎಂಬ ಗೊಂದಲದಲ್ಲಿಯೇ ಇದ್ದಂತೆ ಕಂಡಬಂದಿದೆ. ಕೆಲವರು ಖಾಸಗಿ ಬಸ್ಸುಗಳಿಗೆ ಹತ್ತಲು ಹಿಂದೇಟು ಹಾಕಿರುವುದು ಕಂಡು ಬಂದಿದೆ.
ನಗರದಿಂದ ತುಮಕೂರು ಜಿಲ್ಲೆಯ 9 ತಾಲೂಕು ಕೇಂದ್ರಗಳಾದ ತಿಪಟೂರು, ಕುಣಿಗಲ್, ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತುರುವೇಕೆರೆಗಳಿಗೆ ತೆರೆಳಲು ಸರಿಯಾದ ಬಸ್ಸುಗಳಿಲ್ಲದ ಪ್ರಯಾಣಿಕರು ಪರದಾಡುವಂತಾಗಿದೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾರಿಗೆ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಪ್ರಯಾಣಿಕರಿಗೆ ತೊಂದರೆಯಾಗದ ರೀತಿ ಖಾಸಗಿ ಸಾರಿಗೆ ಸೇವೆ ಉಪಯೋಗಿಸಿಕೊಳ್ಳಲು ತೀರ್ಮಾನಿಸಿ ಅಗತ್ಯ ಕ್ರಮ ಕೈಗೊಂಡಿದ್ದರೂ ಸಹ ಅಂತಹ ದೊಡ್ಡ ಪ್ರಮಾಣದ ಪ್ರಯೋಜನವಾದಂತೆ ಕಂಡು ಬಂದಿಲ್ಲ.