ತುಮಕೂರು :
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವುದನ್ನು ಖಾತರಿ ಪಡಿಸಿಕೊಳ್ಳಲು ಜಿಲ್ಲಾಡಳಿತದ ವತಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಆದೇಶಿಸಿದ್ದಾರೆ.
ತುಮಕೂರು ಎತ್ತಿನಹೊಳೆ ನಾಲಾ ವಲಯ ವಿಶೇಷ ಭೂಸ್ವಾಧೀನಾಧಿಕಾರಿ ಎಂ.ಎನ್.ಮಂಜುನಾಥ್(9448892554), ತುಮಕೂರು ರಾಯದುರ್ಗ ಮತ್ತು ತುಮಕೂರು ದಾವಣಗೆರೆ ರೈಲ್ವೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಧರ್ಮಪಾಲ್ ಎಸ್.(9844772655/6361429336), ತುಮಕೂರು-ಎನ್‍ಹೆಚ್-206ನ ವಿಶೇಷ ಭೂಸ್ವಾಧೀನಾಧಿಕಾರಿ ನಟರಾಜ್(7829532974), ಜಿಲ್ಲಾಸ್ಪತ್ರೆ ಫಿಜಿಶಿಯನ್ ಡಾ|| ಭಾನುಪ್ರಕಾಶ್(9740582743), ನೇತ್ರ ತಜ್ಞೆ ಡಾ|| ಅಸ್ಗರ್ ಬೇಗ್ ಸಿ.ಐ(9880342309) ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಈ ಅಧಿಕಾರಿಗಳು ತಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆವಾರು ಕೋವಿಡ್-19 ಸೋಂಕಿತರಿಗೆ ಪ್ರತ್ಯೇಕವಾಗಿ ಶೇ.20ರಷ್ಟು ಮೀಸಲಿರಿಸಿರುವ ಹಾಸಿಗೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು. ಹಾಸಿಗೆಗಳ ಅನುಗುಣವಾಗಿ ಸೋಂಕಿತರಿಗೆ ಹಾಸಿಗೆಗಳನ್ನು ಹಂಚಿಕೆ ಮಾಡಲು ಕ್ರಮವಹಿಸುವುದು. ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ತಿರಸ್ಕರಿಸುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಅಂತಹ ಆಸ್ಪತ್ರೆಗಳಿಗೆ ಭೇಟಿ ನೀಡಿ ದಾಖಲೆ ಮಾಡಿಕೊಳ್ಳುವಂತೆ ಕ್ರಮವಹಿಸುವುದು. ಪ್ರತಿನಿತ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವುದು. ಚಿಕಿತ್ಸೆಗಾಗಿ ನಿಗಧಿಪಡಿಸಿರುವ ಶುಲ್ಕಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆಗಳನ್ನು ಮೀಸಲಿರಿಸದೆ ಇದ್ದಲ್ಲಿ ಅಂತಹ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.