ತುಮಕೂರು :
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಾತ್ರೆ, ಸಭೆ, ಸಮಾರಂಭ, ನಾಟಕ ಪ್ರದರ್ಶನಗಳು ನಡೆಯದಂತೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಜಾತ್ರೆ, ಮತ್ತಿತರ ಸಭೆ/ ಸಮಾರಂಭಗಳು ನಡೆದರೆ ಆಯಾ ತಾಲ್ಲೂಕಿನ ತಹಶೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳನ್ನು ಪೂರ್ಣ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಿಗಧಿತ ಗುರಿಯಂತೆ ತಾಲ್ಲೂಕುವಾರು ಪ್ರತಿದಿನ ವೈಜ್ಞಾನಿಕವಾಗಿ ಕನಿಷ್ಠ ತಲಾ 500 ಸ್ವಾಬ್ ಸಂಗ್ರಹಣೆ ಮಾಡಬೇಕು. ಸಂಗ್ರಹಿಸಲಾದ ಮಾದರಿಗಳನ್ನು SಂಖI/ IಐI/ ಅomoಡಿbiಜ / ಪ್ರಥಮ ಮತ್ತು ದ್ವಿತೀಯ ಸಂಪರ್ಕಿತ ಮಾದರಿಗಳೆಂದು ಗುರುತು ಮಾಡಿ ವಿಂಗಡಣೆ ಮಾಡಬೇಕು. ನಂತರ ನಿಯಮಾನುಸಾರ ಸಂಬಂಧಿಸಿದ ಲ್ಯಾಬ್ಗೆ ರವಾನಿಸಿ ಆದ್ಯತೆ ಮೇರೆಗೆ ಪರೀಕ್ಷೆಗೊಳಪಡಿಸಿ 24 ಗಂಟೆಯೊಳಗಾಗಿ ಫಲಿತಾಂಶ ನೀಡಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲಾಸ್ಪತ್ರೆ ಮತ್ತು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಸ್ಥಾಪಿಸಿರುವ ಆರ್ಟಿಪಿಸಿಆರ್ ಲ್ಯಾಬ್ಗೆ ಅಗತ್ಯವಿರುವ ಯಂತ್ರಗಳು, ಸಾಮಗ್ರಿಗಳು, ನುರಿತ ಸಿಬ್ಬಂದಿಗಳು ಲಭ್ಯವಿರುವಂತೆ ಕ್ರಮ ಕೈಗೊಂಡು ಯಾವುದೇ ಲೋಪದೋಷ ಉಂಟಾಗದಂತೆ ಕ್ರಮವಹಿಸಬೇಕು ಎಂದರು.
ಕೋವಿಡ್-19 ಸೋಂಕು ದೃಢಪಟ್ಟಿರುವ ವ್ಯಕ್ತಿಯು ಕನಿಷ್ಠ 20 ಪ್ರಥಮ ಮತ್ತು 20 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಬೇಕು. ಗುರುತಿಸಲಾದ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಹಾಗೂ ಸರ್ಕಾರದಿಂದ ಈಗಾಗಲೇ ಗುರುತಿಸಲಾಗಿರುವ ಹೊರ ರಾಜ್ಯ ಪ್ರಯಾಣಿಕರನ್ನು ಹೋಂ ಐಸೋಲೇಷನ್/ ಹೋಂ ಕ್ವಾರಂಟೈನ್ನಲ್ಲಿರಿಸಿ ಅವರ ದೈನಂದಿನ ಆರೋಗ್ಯದ ಮಾಹಿತಿ ಪಡೆದು ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗಿರುವ SಂಖI/IಐI(ಕೆಮ್ಮು, ನೆಗಡಿ, ಜ್ವರದಂತಹ) ರೋಗಲಕ್ಷಣಗಳಿರುವ ಪ್ರಕರಣಗಳ ಬಗ್ಗೆ ಹಾಗೂ ಔಷಧಾಲಯಗಳಲ್ಲಿ ಕೋವಿಡ್-19 ರೋಗದ ಲಕ್ಷಣಕ್ಕೆ ಸಂಬಂಧಿಸಿದಂತೆ ಔಷಧಿ ಪಡೆದವರ ಮಾಹಿತಿ ಸಂಗ್ರಹಿಸಬೇಕು ಎಂದರು
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೇಮಿಸಲಾದ ಅಧಿಕಾರಿಗಳು ಹಾಗೂ ತಾಲ್ಲೂಕುವಾರು ಈಗಾಗಲೇ ನಿಯೋಜಿಸಲಾಗಿರುವ ಕಾರ್ಯಕ್ರಮ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಕೋವಿಡ್ ಸೋಂಕನ್ನು ತಡೆಗಟ್ಟಬೇಕೆಂದರು.
ಕಳೆದ 10 ದಿನಗಳಿಂದ ಹೆಚ್ಚು ಕೋವಿಡ್-19 ಪ್ರಕರಣ ದಾಖಲಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ ಆಶಾ/ ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ-ಮನೆ ಸಮೀಕ್ಷೆ ಕೈಗೊಂಡು ಕೋವಿಡ್-19 ಪರೀಕ್ಷೆ ನಡೆಸಬೇಕಲ್ಲದೆ ಕೋವಿಡ್ ಲಸಿಕೆ ಪಡೆಯುವಂತೆ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ 45 ವರ್ಷ ಮೇಲ್ಪಟ್ಟವರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸರ್ಕಾರ ನಿಗಧಿಪಡಿಸಿರುವಂತೆ ಪ್ರತಿನಿತ್ಯ ಕನಿಷ್ಠ 20,000 ಜನರಿಗೆ ಲಸಿಕೆ ನೀಡುವಂತೆ ಕ್ರಮ ವಹಿಸಬೇಕು. ಪ್ರತಿ ಕೋವಿಡ್ ಲಸಿಕಾ ಕೇಂದ್ರದಲ್ಲಿ 60 ರಿಂದ 100 ಮಂದಿಗೆ ಲಸಿಕೆ ನೀಡುವ ಗುರಿ ಸಾಧಿಸಬೇಕು ಎಂದರಲ್ಲದೆ ಕೋವಿಡ್ ನಿಯಂತ್ರಣದೊಂದಿಗೆ ಲಸಿಕಾಕರಣದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರು.
ಆರ್ಸಿಹೆಚ್ ಅಧಿಕಾರಿ ಡಾ|| ಕೇಶವರಾಜ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲಾದ್ಯಂತ ಏಪ್ರಿಲ್ 16 ರಿಂದ 30ರವರೆಗೆ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೋವಿಡ್ ಮಾರ್ಗಸೂಚಿಯನ್ನನುಸರಿಸಿ ಆಶಾ/ ಆರೋಗ್ಯ ಕಾರ್ಯಕರ್ತೆಯರು ಪ್ರತಿ ಮನೆ-ಮನೆಗೆ ಭೇಟಿ ನೀಡಿ ಅಲ್ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲಿದ್ದಾರೆ. ಈ ಜಂತು ಹುಳು ನಿವಾರಣಾ ಮಾತ್ರೆಯನ್ನು ತಪ್ಪದೇ 1 ರಿಂದ 19 ವರ್ಷದೊಳಗಿನ ಮಕ್ಕಳು ಪಡೆಯಬೇಕೆಂದು ಮನವಿ ಮಾಡಿದರು.
ನಿಯಮ ಉಲ್ಲಂಘನೆ ಮಾಡಿ ಮದುವೆ ಕಾರ್ಯಗಳಿಗೆ ಅವಕಾಶ ನೀಡುವ ಕಲ್ಯಾಣಮಂಟಪಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸೂಚನೆ ನೀಡಿದರು.
ಜಾತ್ರೆ ಬಗ್ಗೆ ಮಾಹಿತಿ ನೀಡದ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತ್ತು ಮಾಡಲಾಗುವುದು. ಪಿಡಿಓ/ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಭೆ/ಸಮಾರಂಭ/ಜಾತ್ರೆಗಳು ಜರುಗುವ ಸಾಧ್ಯತೆಯಿದ್ದರೆ ಪ್ರತಿನಿತ್ಯ ಆಯಾ ತಹಶೀಲ್ದಾರರಿಗೆ ಮಾಹಿತಿ ನೀಡಬೇಕು. ಜಾತ್ರೆ, ಪ್ರತಿಭಟನೆಗಳು ನಡೆಯುವ ಬಗ್ಗೆ ಪ್ರಾಥಮಿಕ ಮಾಹಿತಿ ಹೊಂದಿದ್ದು, ಸೂಕ್ತ ಕ್ರಮಕೈಗೊಳ್ಳದೆ ಜಾತ್ರೆ ನಡೆಯಲು ಅವಕಾಶ ನೀಡುವ ತಹಶೀಲ್ದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಕೋವಿಡ್-19 ತಡೆಗಟ್ಟುವಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಿಡಿಓಗಳಿಗೆ ನಿಗಧಿತ ಗುರಿಯಂತೆ ಸ್ವಾಬ್ ಸಂಗ್ರಹ, ಲಸಿಕಾಕರಣ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಬೇಕೆಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಸುರೇಶಬಾಬು, ಸರ್ವೆಲೆನ್ಸ್ ಅಧಿಕಾರಿ ಡಾ|| ಮೋಹನ್ದಾಸ್, ಮತ್ತಿತರರು ಹಾಜರಿದ್ದರು.