ತುಮಕೂರು  :

      ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಗರ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸೋಂಕು ಗ್ರಾಮಗಳಿಗೆ ವ್ಯಾಪಿಸದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.

       ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯ್ತಿಗಳ ಅಧ್ಯಕ್ಷರು, ಸದಸ್ಯರು, ಪಿಡಿಒಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಮಾತನಾಡಿದ ಅವರು, ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿನ ಕಾರ್ಯಪಡೆಯು ಗ್ರಾಪಂ ವ್ಯಾಪ್ತಿಯ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಬಿಲ್‍ಕಲೆಕ್ಟರ್, ವಾಟರ್‍ಮೆನ್ ಸೇರಿದಂತೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಳಸಿಕೊಂಡು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಗ್ರಾಮಗಳಿಗೆ ಕೊರೊನಾ ಸುಳಿಯದಂತೆ ತಡೆಗಟ್ಟಬೇಕು ಎಂದು ನಿರ್ದೇಶಿದರು.

      ಅಧಿಕಾರಿಗಳು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕೋವಿಡ್-19 ಹರಡದಂತೆ ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ನಿಯಂತ್ರಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರಲ್ಲದೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಕೋವಿಡ್ ಲಕ್ಷಣಗಳು ಕಂಡುಬಂದವರ ಸ್ವ್ಯಾಬ್ ಸಂಗ್ರಹ ಮಾಡುವುದರೊಂದಿಗೆ, 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದರು.

      ಬೆಂಗಳೂರಿನಿಂದ ಗ್ರಾಮಕ್ಕೆ ಬರುವವರಿಗೆ ಕಡ್ಡಾಯವಾಗಿ ರ್ಯಾಟ್ (ಖಂಖಿ-ಖಚಿಠಿiಜ ಂಟಿಣigeಟಿಣ ಖಿesಣ) ಟೆಸ್ಟ್‍ಗೊಳಪಡಿಸಬೇಕು. ನಿತ್ಯ ಬೆಂಗಳೂರಿಗೆ ಹೋಗಿ ಬರುವವರಿಗೆ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವಂತೆ ತಿಳಿ ಹೇಳಬೇಕು ಎಂದು ನಿರ್ದೇಶಿದರು.

      ಗ್ರಾಮಗಳಲ್ಲಿ ಜರುಗುವ ಕುರಿ/ದನಗಳ ಸೇರಿದಂತೆ ವಿಶೇಷ ಸಂತೆಗಳಿಗೆ ಅವಕಾಶವಿಲ್ಲ. ಮದುವೆ, ಸಭೆ-ಸಮಾರಂಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳುವ ಜವಾಬ್ದಾರಿ ಕಾರ್ಯಪಡೆಯದ್ದೇ ಆಗಿದ್ದು, ಕೋವಿಡ್ ಹರಡದಂತೆ ಜಾಗೃತಿ ವಹಿಸಬೇಕು ಎಂದರು.

       ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಅಧಿಕಾರವನ್ನು ಕಾರ್ಯಪಡೆಗೆ ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ತರಕಾರಿ, ಹೂ, ಹಣ್ಣು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಕೋವಿಡ್ ನಿಯಮಾವಳಿ ಪಾಲಿಸಿಕೊಂಡೇ ವ್ಯಾಪಾರ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

       ಕೋವಿಡ್ ಪಾಸಿಟಿವ್ ದೃಢಪಟ್ಟು ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರು ಹೊರಗಡೆ ತಿರುಗಾಡದಂತೆ ಅವರ ಮನೆಯವರಿಗೆ ಅರಿವು ಮೂಡಿಸಿ, ಸೋಂಕಿತರು ತಿರುಗಾಡದಂತೆ ಪಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

       ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಕೋವಿಡ್ ನಿಯಾಮವಳಿಯನ್ನು ಗ್ರಾಪಂ ಮಟ್ಟದ ಕಾರ್ಯಪಡೆ ಕಟ್ಟುನಿಟ್ಟಾಗಿ ಪಾಲಿಸಿದರೆ ಗ್ರಾಮಕ್ಕೆ ಕೋವಿಡ್ ಹರಡದಂತೆ ತಡೆಯಬಹುದು. ಈ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿನ ವ್ಯಾಪಾರಸ್ಥರಿಗೆ ಕಡ್ಡಾಯವಾಗಿ ರ್ಯಾಟ್ ಟೆಸ್ಟ್‍ಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.
ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಕೈಗೊಂಡು ಸೋಂಕಿನ ಲಕ್ಷಣಗಳಿರುವವರು ಕಂಡುಬಂದವರನ್ನು ರ್ಯಾಟ್ ಟೆಸ್ಟ್‍ಗೆ ಒಳಪಡಿಸಬೇಕು ಎಂದರಲ್ಲದೆ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮತ್ತು ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

      ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ನಗರಗಳಿಗೆ ಅನಾವಶ್ಯಕವಾಗಿ ಓಡಾಡುವವರಿಗೆ ಕಡಿವಾಣ ಹಾಕಬೇಕು. ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್ ಹರಡದಂತೆ ಕ್ರಮ ಕೈಗೊಳ್ಳಬೇಕು. ಎಲ್ಲರೂ ಶುಚಿತ್ವ ಕಾಪಾಡಿಕೊಳ್ಳುವಲ್ಲಿ ಅರಿವು ಮೂಡಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ಅಂತವರಿಗೆ ಮತ್ತು ಅವರ ಸಂಪರ್ಕಿತರಿಗೆ ಸ್ವ್ಯಾಬ್ ಸಂಗ್ರಹಿಸಲು ಒತ್ತು ಕೊಡಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೆಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮದಲ್ಲಿರುವ 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಲು ಸೂಚಿಸಬೇಕು. ಮೊದಲ ಹಂತದ ಲಸಿಕೆ ಪಡೆದವರು ಆರು ವಾರಗಳ ನಂತರ ಎರಡನೇ ಹಂತದ ಲಸಿಕೆ ಪಡೆದುಕೊಳ್ಳುವಂತೆ ಅರಿವು ಮೂಡಿಸಬೇಕು. ಕೊರೊನಾ ನಿಯಾಮಳಿ ಅನುಸರಿಸಿಕೊಂಡು ಕಡಿಮೆ ಸಂಖ್ಯೆಯಲ್ಲಿ ಗ್ರಾಮ ಸಭೆ ನಡೆಸಿ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಕೊರೊನಾ ಮುಕ್ತ ಗ್ರಾಮಕ್ಕೆ ಶ್ರಮಿಸಬೇಕು ಎಂದು ನಿರ್ದೇಶಿಸಿದರು.

(Visited 9 times, 1 visits today)