ತುಮಕೂರು:
ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರಸ್ಥರು ಮೇ.4ರವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ವಿಶ್ವದೆಲ್ಲಡೆ ರಣಕೇಕೆ ಹಾಕುತ್ತಿರುವ ಈ ಕೊರೊನಾ ವೈರಸ್ ಸೋಮಕು ತನ್ನ ಕದಂಬ ಬಾಹುಗಳನ್ನು ಎಲ್ಲೆಡೆ ಚಾಚುತ್ತಾ ಸೋಂಕು ಹರಡಲು ಹವಣಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಬಿಹೆಚ್ ರಸ್ತೆ, ಎಂಜಿ ರಸ್ತೆ, ಎಸ್‍ಎಸ್ ಪುರಂ, ಅಶೋಕ ರಸ್ತೆ, ಮಂಡಿಪೇಟೆ ರಸ್ತೆ ಸೇರಿದಂತೆ ಹೆಚ್ಚು ವಹಿವಾಟು ನಡೆಯುವ ಪ್ರದೇಶದಲ್ಲಿ ಜನಸಂದಣಿ ಆಗಬಾರದೆಂದು ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದು, ಪೊಲೀಸ್ ಪೇದೆಗಳು ಖುದ್ದು ಪ್ರಮುಖ ರಸ್ತೆಗಳಿಗೆ ಇಳಿದು ಬಂದ್ ಮಾಡುವಂತೆ ಸೂಚಿಸುತ್ತಿದ್ದಾರೆ.
ಜನದಟ್ಟಣೆ ಜಾಸ್ತಿ ಇರುವ ಕಡೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಜನಸಂಪರ್ಕ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಆನಸಾಮಾನ್ಯರೂ ಸಹ ಜನಸಂದಣಿಗೆ ಅವಕಾಶ ಕೊಡಬಾರದು. ಹೋಟೆಲ್ ಉದ್ಯಮಿಗಳು ಪಾರ್ಸಲ್‍ಗೆ ಅಷ್ಟೇ ಅವಕಾಶ ಕಲ್ಪಿಸಿದ್ದಾರೆ.
ಟೀ ಸ್ಟಾಲ್‍ಗಳು, ಜ್ಯೂಸ್ ಅಂಗಡಿಗಳು ತೆರೆಯದಂತೆ ಸೂಚನೆ ನೀಡಿದ್ದಾರೆ. ಪ್ರತಿನಿತ್ಯ ಜಿಲ್ಲಾಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಸಾಕಷ್ಟು ಸೋಂಕಿತರು ಎಡತಾಕುತ್ತಿದ್ದಾರೆ. ಸರ್ಕಾರದ ಆದೇಶ ಅನ್ವಯ ಮೇ 4ರವರೆಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಜನರು ಗುಂಪಾಗಿ ನಿಲ್ಲುವುದು, ಟೋಕನಾಗಾಗಿ ಕ್ಯೂ ನಿಲ್ಲುವುದನ್ನು ತಪ್ಪಿಸಲಾಗಿದೆ.
ನೆನ್ನೆ ಅತೀ ಹೆಚ್ಚು ಪ್ರಕರಣ: ಜಿಲ್ಲೆಯಲ್ಲಿ ನೆನ್ನೆ ಒಂದೇ 1199 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದು ಟಿಪಿಸಿಆರ್‍ನಲ್ಲಿ 24 ಗಂಟೆ ಹಿಂದಿನ ಟೆಸ್ಟ್ ಮಾಡಿದ ಪ್ರಕರಣಗಳಾಗಿವೆ. ನೆನ್ನೆ ತುಮಕೂರು ನಗರದಲ್ಲೇ 637 ಪ್ರಕರಣಗಳು ದೃಢಪಟ್ಟಿವೆ. ಇಂದು ಮತ್ತು ನಾಳೆ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ.
ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದಿದ್ದರೆ ದಂಡ ತೆತ್ತಬೇಕಾಗುತ್ತದೆ. ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಮಹಾನಗರ ಮಾಲಿಕೆ ನೀಡಿರುವ ಶಿಸ್ತು ಕ್ರಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.