ಮಧುಗಿರಿ :
ಪಟ್ಟಣದಲ್ಲಿರುವ ಗುರುಭವನದ ತಾಲ್ಲೂಕು ಸಮಿತಿಯಲ್ಲಿನ ಹಣಕಾಸಿನ ಅವ್ಯವಹಾರಗಳನ್ನು ಖಂಡಿಸಿ ಡಿ.1 ರಂದು ಮಧ್ಯಾಹ್ನ 12.30 ಕ್ಕೆ ಬಿ.ಇ.ಒ ಕಚೇರಿ ಎದುರು ಶಾಂತಿಯುತ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು 9 ಶಿಕ್ಷಕರ ಸಂಘಗಳು ಪ್ರಕಟಣೆಯಲ್ಲಿ ತಿಳಿಸಿದೆ.
ಗುರುಭವನದ ವಾಣಿಜ್ಯ ಮಳಿಗೆಗಳ ಸಂಪೂರ್ಣ ಕಾಮಗಾರಿಯ ಖರ್ಚು, ವೆಚ್ಚಗಳನ್ನು ಪಾಸ್ ಬುಕ್ ಸಹಿತ ನೀಡಬೇಕು, 31 ಅಂಗಡಿ ಮಳಿಗೆಗಳಿಂದ ವಸೂಲಾಗಿರುವ 12 ತಿಂಗಳ ಬಾಡಿಗೆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮ ಮಾಡಿಬೇಕು, ಸರಕಾರದ ಸುತ್ತೋಲೆಯಂತೆ ಗುರುಭವನ ಸಮಿತಿಯ ಅಧ್ಯಕ್ಷರು ಮತ್ತು ಖಜಾಂಚಿಗಳು ಜಂಟಿಯಾಗಿ ಖಾತೆಯನ್ನು ನಿರ್ವಹಿಸಬೇಕು, 31 ಅಂಗಡಿ ಮಳಿಗೆಯವರಿಂದ ಬಾಡಿಗೆಯನ್ನು ನಗದು ರೂಪದಲ್ಲಿ ವಸೂಲು ಮಾಡದೆ ನೇರವಾಗಿ ಗುರುಭವನ ಸಮಿತಿಯ ಜಂಟಿ ಖಾತೆಗೆ ಅಂಗಡಿಯವರೆ ಬಾಡಿಗೆಯನ್ನು ಸಂದಾಯ ಮಾಡಿ ಹಣವನ್ನು ಕಟ್ಟಿದ ರಶೀದಿಯನ್ನು ನಿರ್ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಬ್ಬ ಗುಮಾಸ್ತರನ್ನು ನೇಮಿಸಬೇಕು, ಸರಕಾರದ ಸುತ್ತೋಲೆಯಂತೆ ಗುರುಭವನ ಸಮಿತಿಯು ಪುನರ್ ರಚನೆಯಾಗಬೇಕು. ಗುರುಭವನ ಸಮಿತಿಯಲ್ಲಿ ಆಗಿದೆ ಎನ್ನಲಾದ ಹಣಕಾಸಿನ ಅವ್ಯವಹಾರವನ್ನು ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಆದ್ದರಿಂದ ಶಿಕ್ಷಕ ಬಂಧು ಗಳು ಗುರುಭವನದ ಸಮಿತಿಯಲ್ಲಿ ನಡೆದಿರುವ ಹಗರಣಗಳ ಸ್ಪೋಟಕ ಸತ್ಯಗಳನ್ನು ದಾಖಲೆ ಸಹಿತ ಬಿಡುಗಡೆ ಮಾಡಲಾಗುವುದು ಎಂದು ಸಂಘಟನೆಗಳು ಕರ ಪತ್ರಗಳನ್ನು ಶಿಕ್ಷಕ ಸಮುದಾಯಕ್ಕೆ ಹಂಚಲಾಗುತ್ತಿದೆ.
ಆರೋಪ :
ಗುರುಭವನದ ಮುಂದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದು ಸಂತೋಷದ ವಿಚಾರ ಆದರೆ ಅಂಗಡಿಗಳು ನಿರ್ಮಾಣವಾಗಿ ವರ್ಷ ಕಳೆದರೂ ಗುರುಭವನ ಸಮಿತಿಯವರು ಲೆಕ್ಕ ಪತ್ರಗಳನ್ನು ನೀಡದೆ ಮಳಿಗೆಗಳು ತಮ್ಮ ಸ್ವಂತ ಆಸ್ತಿಯಂತೆ ವರ್ತಿಸುತ್ತಿರುವುದು ಅತ್ಯಂತ ದುರಂತ. ಒಂದೊಂದು ಅಂಗಡಿ ಮಳಿಗೆಗಳಿಂದಲೂ 3 ಲಕ್ಷ ರೂ. ಮುಂಗಡ ಪಡೆಯುವುದರ ಜೊತೆಗೆ ಮುಂಭಾಗದ ಕೆಲವು ಅಂಗಡಿಗಳಿಗೆ ಗುಡ್‍ವಿಲ್ ಸಹ ಪಡೆದಿರುತ್ತಾರೆ. ಈ ಎಲ್ಲಾ ಹಣವನ್ನು ನಿಯಮಾನುಸಾರ ಗುರುಭವನದ ಸಮಿತಿಯ ಜಂಟಿ ಖಾತೆಗೆ ಕಟ್ಟಿ ನಂತರ ಸಮಿತಿಯ ನಡಾವಳಿಯಂತೆ ಖರ್ಚು ಮಾಡಬೇಕಾಗಿರುತ್ತದೆ. ಈ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. 2017 ರ ಡಿ.10 ರಂದು ಸಿ.ಎಂ.ಸಿದ್ದರಾಮಯ್ಯರವರಿಂದ ಅಧಿಕೃತವಾಗಿ ಈ ಅಂಗಡಿ ಮಳಿಗೆ ಉದ್ಘಾಟನೆಗೊಂಡು ಅಂದಿನಿಂದ ಇಲ್ಲಿಯ ವರೆಗೂ ಬಾಡಿಗೆ ವಸೂಲಿ ಮಾಡಲಾಗಿದ್ದು ಅಂದಾಜು 9 ಲಕ್ಷ ರೂ. ಬಾಡಿಗೆ ವಸೂಲಾಗಿದೆ. ಆದರೆ ಈ ಹಣ ಇಲ್ಲಿಯ ವರೆವಿಗೂ ಗುರುಭವನ ಸಮಿತಿಗೆ ಜಮೆಯಾಗಿರುವುದಿಲ್ಲ. ಹಳೇ ಗುರುಭವನದ ಹಿಂಭಾಗದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ಇಲಾಖಾಧಿಕಾರಿಗಳು ವಸತಿ ಗೃಹಕ್ಕಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಕಟ್ಟಡ ನಿರ್ಮಿಸಿದ್ದು. ಈ ಕಟ್ಟಡವನ್ನು ಖಾಸಗಿ ವ್ಯಕ್ತಿಗೆ ಬಾಡಿಗೆ ನೀಡಿರುವುದು ಹಣಕಾಸಿನ ದುರುಪಯೋಗಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಬೆಂಬಲ :
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮಧುಗಿರಿ ಘಟಕ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಜಿಲ್ಲಾ ಮತ್ತು ತಾಲೂಕು ಶಾಖೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಧುಗಿರಿ ಘಟಕದ ನಿರ್ದೇಶಕರು, ಬಡ್ತಿ ಮುಖ್ಯ ಶಿಕ್ಷಕರ ಸಂಘ, ಉಪನ್ಯಾಸಕರ ಸಂಘ, ಕರ್ನಾಟಕ ರಾಜ್ಯ ಎಸ್‍ಸಿ, ಎಸ್‍ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮತ್ತು ತಾಲ್ಲೂಕು ಶಾಖೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ ಜಿಲ್ಲಾ ಮತ್ತು ತಾಲ್ಲೂಕು ಶಾಖೆ, ಪದವೀಧರರ ಶಿಕ್ಷಕರ ವೇದಿಕೆ, ಎನ್.ಪಿ.ಎಸ್ ಶಿಕ್ಷಕರು ಬೆಂಬಲ ಸೂಚಿಸಿದ್ದಾರೆ.
ಶಿಕ್ಷಣಾಧಿಕಾರಿಯ ದ್ವಿಪಾತ್ರಭಿನಯ :
ಮಧುಗಿರಿಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಎಂ.ವಿ.ರಾಜಣ್ಣ ಗುರುಭವನ ಸಮಿತಿಯ ಅಧ್ಯಕ್ಷರಾಗಿದ್ದು ಇವರು 2017 ರ ಆಗಸ್ಟ್ 24 ರಂದು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯೇ ತಾವೆ ಅಧ್ಯಕ್ಷರೆಂದು ಬಾಡಿಗೆದಾರರ ಕರಾರು ಪತ್ರದಲ್ಲಿ ಸಹಿ ಮಾಡಿರುವುದು ಭಾರಿ ಭ್ರಷ್ಟಚಾರಕ್ಕೆ ಪ್ರಚೋದನೆ ನೀಡಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಕತ್ತಲಿನಲ್ಲಿ ಗುರುಭವನದ ವಾಣಿಜ್ಯ ಮಳಿಗೆಗಳು :
ಬೆಸ್ಕಾಂ ನವರು ಕಳೆದ 1 ವಾರದಿಂದ ಈ ವಾಣಿಜ್ಯ ಮಳಿಗೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಕತ್ತಲಿನಲ್ಲಿ ಮುಳುಗಿಸಿದ್ದಾರೆ. ಇದಕ್ಕೆ ಕಾರಣ ವಾಣಿಜ್ಯ ಸಂಕೀರ್ಣ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಪುರಸಭೆಗೆ ಸುಳ್ಳು ಪ್ರಮಾಣ ಪತ್ರನೀಡಿ ವಸತಿ ಉದ್ದೇಶಕ್ಕೆಂದು ಪುರಸಭೆಯವರಿಗೆ ಮಾಹಿತಿ ನೀಡಿ ತಾತ್ಕಲಿಕ ವಿದ್ಯುತ್ ಸಂಪರ್ಕ ಪಡೆದಿದ್ದರು. ಒಂದು ಕೆವಿ ಯಷ್ಟು ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಆದರೆ 7 ರಿಂದ 8 ಕೆವಿಯಷ್ಟು ವಿದ್ಯುತ್‍ನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದರಿಂದ ಬೆಸ್ಕಾಂ ವಿಚಕ್ಷಣ ದಳದವರು ದಾಳಿ ಮಾಡಿ ದಂಡ ವಸೂಲಿ ಮಾಡಿದ್ದರು. ಆದರೆ ಅಧಿಕೃತ ವಿದ್ಯುತ್ ಸಂಪರ್ಕಕ್ಕೆ ಪುರಸಭೆಯವರು ನೀಡಿರುವ ಎನ್‍ಒಸಿ ಪತ್ರ ಸರಿಯಿಲ್ಲದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಈ ಎಲ್ಲಾ ಹಗರಣಗಳ ಬಗ್ಗೆ 2018 ಆಗಸ್ಟ್ 12 ರಂದು ರಾಜ್ಯ ಮುಖ್ಯಮಂತ್ರಿಗಳು, ರಾಜ್ಯಪಾಲರು, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾ ಪಂಚಾಯಿತ್ ಸಿಇಒ, ಭ್ರಷ್ಟಚಾರ ನಿಗ್ರಹದಳದ ಡಿವೈಎಸ್‍ಪಿ, ಬೆಂಗಳೂರಿನ ಶಿಕ್ಷಕರ ಸದನದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ದೂರನ್ನು ಹಲವು ಶಿಕ್ಷಣ ಸಂಘಟನೆಗಳಿಂದ ಸಲ್ಲಿಸಲಾಗಿದೆ.