ತುಮಕೂರು:

      ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದ ಸಹಕಾರದೊಂದಿಗೆ ನಗರದ ವಿವಿಧಡೆ ಸಾನಿಟೈಜರ್ ಸಿಂಪಡಿಸುವ ಕಾರ್ಯ ನಡೆದಿದ್ದು, ಬುಧವಾರ 15ನೇ ವಾರ್ಡಿನ ಸಿಎಸ್‍ಐ ಲೇಔಟ್‍ನಲ್ಲಿ ರಸ್ತೆಗಳಿಗೆ ಸಾನಿಟೈಜರ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

      ಬೆಂಗಳೂರು ನಗರಕ್ಕೆ ಹತ್ತಿರವಾಗಿರುವ ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಪಾಲಿಕೆ ಆರೋಗ ಸ್ಥಾಯಿ ಸಮಿತಿಯ ಸಭೆಯಲ್ಲಿ ಪ್ರಕರಣ ಹೆಚ್ಚಿರುವ ಬಡಾವಣೆಗಳಿಗೆ ಸಾನಿಟೈಜರ್ ನಡೆಸಲು ತೀರ್ಮಾನ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ, ನಗರಪಾಲಿಕೆಗಳಿಗೆ ಹತ್ತಿರದಲ್ಲಿಯೇ ಇರುವ, ವ್ಯಾಪಾರಸ್ಥರ ಕುಟುಂಬಗಳೇ ವಾಸವಾಗಿರುವ ಸಿಎಸ್‍ಐ ಬಡಾವಣೆಗೆ ಸಾನಿಟೈಜರ್ ಸಿಂಪಡಿಸುವ ಕಾರ್ಯ ಕೈಗೊಳ್ಳಲಾಯಿತು.

       ಈ ವೇಳೆ ಮಾತನಾಡಿದ ನಗರಪಾಲಿಕೆ 15ನೇ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಮಾತನಾಡಿ, ಸಿಎಸ್‍ಐ ಲೇಔಟ್‍ನಲ್ಲಿ 9 ರಸ್ತೆಗಳಿಂದ 600ಕ್ಕು ಹೆಚ್ಚು ಮನೆಗಳಿವೆ. ನಗರದ ಹೃದಯ ಭಾಗದಲ್ಲಿರುವ ಈ ಬಡಾವಣೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ತಿಳಿ ಹೇಳಿ, ಸಾಮೂಹಿಕ ಸಾನಿಟೈಜರ್ ನಡೆಸುವ ಕಾರ್ಯ ಕೈಗೊಳ್ಳಲಾಗಿದೆ. ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಅಗತ್ಯ ವಸ್ತುಗಳಿಗಾಗಿ ಬಹುದೂರ ಪ್ರಯಾಣಿಸುವ ಬದಲು, ತಮ್ಮ ಮನೆಯ ಹತ್ತಿರದಲ್ಲಿಯೇ ಇರುವ ಅಂಗಡಿಗಳಿಗೆ ತೆರಳಿ ಖರೀದಿಸಿ, ರೋಗ ವ್ಯಾಪಕವಾಗಿ ಹರಡದಂತೆ ತಡೆಯಬೇಕೆಂದರು.

       ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ಕೋವಿಡ್-2ನೇ ಅಲೆಯಿಂದ ಹೆಚ್ಚು ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೆಚ್ಚು ಜನರು ಒಡಾಡುವ ಬಡಾವಣೆಗಳಲ್ಲಿಯೇ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೌನ್ಸಿಲ್ ಸಭೆಯಲ್ಲಿ ಅಗತ್ಯವಿರುವ ವಾರ್ಡುಗಳಿಗೆ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಬಡಾವಣೆಯ ರಸ್ತೆಗಳು, ಖಾಲಿ ನಿವೇಶನಗಳು, ಸಿಸಿ ಚರಂಡಿಗಳಿಗೆ ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 15ವಾರ್ಡುಗಳಿಗೆ ದ್ರಾವಣ ಸಿಂಪಡಿಸುವ ಕಾರ್ಯ ಪೂರ್ಣಗೊಂಡಿದೆ ಎಂದರು.

       ಸಿಎಸ್‍ಐ ಲೇಔಟ್‍ನ 9 ರಸ್ತೆಗಳಿಗೂ ಸುಮಾರು 9 ಸಾವಿರ ಲೀಟರ್ ದ್ರಾವಣ ಸಿಂಪಡಿಸಲು ಸಿದ್ದಪಡಿಸಿಕೊಳ್ಳಲಾಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ, ಪೌರ ಕಾರ್ಮಿಕರು, ಆರೋಗ್ಯ ಸಿಬ್ಬಂದಿ ನಮಗೆ ಸಾಥ್ ನೀಡುತ್ತಿದ್ದಾರೆ. ಅವರ ರೀತಿಯಲ್ಲಿಯೇ ನಾಗರಿಕರು ನಮಗೆ ಸಹಕಾರ ನೀಡಿದಲ್ಲಿ, ಬಹುಬೇಗ ನಗರವನ್ನು ಕೊರೋನ ಮುಕ್ತ ಮಾಡಬಹುದು. ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರು ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಿ ಅಗತ್ಯವಿದ್ದಲ್ಲಿ ಮಾಸ್ಕ್ ಧರಿಸಿ ಹೊರಬನ್ನಿ, ಸಾನಿಟೈಜರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯಿರಿ ಎಂದು ನಯಾಜ್ ಅಹಮದ್ ಮನವಿ ಮಾಡಿದರು.   

       ಅಗ್ನಿ ಶಾಮಕ ಠಾಣಾಧಿಕಾರಿ ಪಂಚಾಕ್ಷರಿ ಮಾತನಾಡಿ, ನಗರಪಾಲಿಕೆ ಹಾಗೂ ಜಿಲ್ಲಾಡಳಿತದ ಕೋರಿಕೆ ಮೇರೆಗೆ ನಮ್ಮ ವಾಹನಗಳಲ್ಲಿ ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಸಿಂಪಡಿಸುವ ಕಾರ್ಯ ಮಾಡಲಾಗುತ್ತದೆ. ದೊಡ್ಡ ವಾಹನಗಳ ಜೊತೆಗೆ, ಚಿಕ್ಕ ವಾಹನಗಳಲ್ಲಿಯೂ ಈ ಕಾರ್ಯ ಸಮರೋಪಾಧಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಈ ವೇಳೆ ವಾರ್ಡಿನ ಆರೋಗ್ಯ ನಿರೀಕ್ಷಕ ರುದ್ರೇಶ್, ಅಗ್ನಿ ಶಾಮಕದಳದ ಸಿಬ್ಬಂದಿಗಳಾದ ಅಬ್ದುಲ್ ರಫಿ, ರವಿನಾಯಕ್, ಚಾಲಕ ವೆಂಕಟೇಶ್, ವಾರ್ಡಿನ ದಫೇದಾರ್ ಚಿಕ್ಕಗಂಗಪ್ಪ, ಪೌರಕಾರ್ಮಿಕರಾದ ಶ್ರೀನಿವಾಸ್, ಗೋಪಾಲ್, ಅಯ್ಯಪ್ಪ ಇದ್ದರು.

(Visited 15 times, 1 visits today)