ಹುಳಿಯಾರು:
ಕೊರೊನಾ ಸೋಂಕಿನ ಆತಂಕ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಜನರಲ್ಲಿ ಪ್ರಾಣಭಯ ಹುಟ್ಟಿಸಿದ್ದು ಸೂಕ್ತ ಚಿಕಿತ್ಸೆಗಾಗಿ ಸರ್ಕಾರದ ಮುಂದೆ ಕೈಚಾಚಿ ಕೂತಿದ್ದಾರೆ. ಆದರೂ ಸರ್ಕಾರ ಮಾತ್ರ ಈ ವಿಚಾರವನ್ನು ಇನ್ನೂ ಗಂಭೀರವಾಗಿ ಪರಿಗಣಿಸದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಎಣ್ಣೇಗೆರೆಯಲ್ಲಿ ಶನಿವಾರ ನಡೆದ ಘಟನೆ ಸ್ಪಷ್ಟ ನಿದರ್ಶನವಾಗಿದೆ.
ಹೌದು, ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿಯ ಹುಲ್ಲೇನಹಳ್ಳಿಯ ನೀರುಘಂಟಿ ಲಕ್ಕಪ್ಪ ಅವರಿಗೆ ಸಿಕ್ಕಾಪಟ್ಟೆ ಜ್ವರ ಬಂದಿದೆ. ಪರಿಣಾಮ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಶನಿವಾರ ಮಧ್ಯಾಹ್ನ ಆಗಮಿಸಿದ್ದಾರೆ. ಆದರೆ ಮಧ್ಯಾಹ್ನಕ್ಕೆ ಆಸ್ಪತ್ರೆಯ ಬೀಗ ಜಡಿದು ಸಿಬ್ಬಂದಿಗಳೆಲ್ಲರೂ ತೆರಳಿದ್ದಾರೆ. ಚಿಕಿತ್ಸೆ ಸಿ ಗದೆ ಬೀಗ ಜಡಿದ ಬಾಗಿಲ ಬಳಿಯೇ ಜ್ವರ ಪೀಡಿತ ಲಕ್ಕಪ್ಪ ನರಳಾಡಿದ್ದಾರೆ. ಈತನ ನರಳಾಟ ಗಮನಿಸಿದ ಮತ್ತೊಬ್ಬ ವಾಟರ್ ಮ್ಯಾನ್ ಕುಮಾರ್ ಓಡೋಡಿ ಬಂದು ಮೆಡಿಕಲ್ ಸ್ಟೋರ್‍ನಲ್ಲಿ ಮಾತ್ರೆ ತಂದು ನುಂಗಿಸಿದ್ದಾನೆ.
ಅಲ್ಲದೆ ತಕ್ಷಣ ಗ್ರಾಪಂ ಪಿಡಿಓ ಅಡವೀಶ್ ಅವರಿಗೆ ದೂರವಾಣಿ ಕರೆ ಮೂಲಕ ವಿಷಯ ಮುಟ್ಟಿಸಿದ್ದಾರೆ. ಪಿಡಿಓ ಅವರು ಗ್ರಾಪಂ ಸದಸ್ಯ ಪ್ರಶಾಂತ್ ಅವರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪ್ರಶಾಂತ್ ಆಸ್ಪತ್ರೆ ಬಳಿ ಧಾವಿಸಿ ಬಂದು ನೋಡಿದಾಗ ಲಕ್ಕಪ್ಪ ಜ್ವರದಿಂದ ನರಳುತ್ತಿದ್ದಾರೆ. ತಕ್ಷಣ ಡಾ.ದಿಲೀಪ್ ಅವರಿಗೆ ಕರೆ ಮಾಡಿ ಕೇಳಿದಾಗ ಅವರು ಕೊರೊನಾ ಬಂದು ಐಸೋಲೇಷನ್‍ನಲ್ಲಿರುವುದಾಗಿ ತಿಳಿಸಿದ್ದಾರೆ. ನಂತರ ಹೆಲ್ತ್‍ಇನ್ಸಫೆಕ್ಟರ್ ಮಂಜುನಾಥ್ ಅವರಿಗೆ ಕರೆ ಮಾಡಿದಾಗ ಬೆಳಗ್ಗೆಯಿಂದ ಇದ್ದೇವೆ ಶನಿವಾರ ನಮ್ಮದು ಆಫ್ ಡ್ಯೂಟಿ ಮತಿಘಟ್ಟ ಆಸ್ಪತ್ರೆಗೆ ಕರೆದೋಗಿ ಎಂದಿದ್ದಾರೆ.
ತಕ್ಷಣ ಜ್ವರ ಪೀಡಿತನನ್ನು ಬೈಕ್ ಮೂಲಕ ಮತಿಘಟ್ಟ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ತಾಲೂಕು ವೈದ್ಯಾಧಿಕಾರಿಗಳಿಗೆ ತಾಲೂಕಿನ ಆರೋಗ್ಯ ವ್ಯವಸ್ಥೆ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆಯ ಬಗ್ಗೆ ಪ್ರಶಾಂತ್ ಕಿಡಿಕಾರಿದ್ದಾರೆ. ತಾಲೂಕು ವೈದ್ಯಾಧಿಕಾರಿಗಳು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜ್ವರಪೀಡಿತನಿಗೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ತಾಲೂಕಿನ ಆರೋಗ್ಯ ಸೇವೆಯ ವ್ಯತ್ಯಯದಿಂದಾಗಿ ಮಧ್ಯಾಹ್ನ ಜ್ವರಬಂದ ಲಕ್ಕಪ್ಪ ಸಂಜೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತ್ತಾಗಿದೆ. ಲಕ್ಕಪ್ಪನವರಿಗೆ ಕೊರೊನಾ ಚಿಕಿತ್ಸೆ ನೀಡುತ್ತಿದ್ದು ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ.
ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುವ ರೋಗವಾಗಿದ್ದು ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೇ ಸಂಚಕಾರ ಬಂದೊದಗುತ್ತದೆ. ಹಾಗಾಗಿಯೇ ಸರ್ಕಾರ ಲಾಕ್‍ಡೌನ್ ಘೋಷಿಸಿ ಕೊರೊನಾ ತಪಾಸಣೆ, ಕೊರೊನಾ ಲಸಿಕೆ ನೀಡುತ್ತಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಕೊರೊನಾ ಪೀಡಿತರು ಪತ್ತೆಯಾಗದೆ ಜನರ ನಡುವೆ ಓಡಾಡುತ್ತ ಇತರರಿಗೆ ಹಬ್ಬಿಸುತ್ತಿದ್ದಾರೆ. ಪತ್ತೆಯಾದವರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಇನ್ನಾದರೂ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಕೊರೊನಾ ಸೋಂಕಿನ ಸರಪಳಿ ತುಂಡಾಗಿಸುವುದು ಅಸಾಧ್ಯ.