ತುಮಕೂರು :
ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಗಾಗಿ ಸಿದ್ಧಗಂಗಾ ಮಠದ ವತಿಯಿಂದ ಸಿದ್ಧಗಂಗಾ ಆಸ್ಪತ್ರೆ ಸಹಯೋಗದೊಂದಿಗೆ ಶ್ರೀ ಸಿದ್ಧಗಂಗಾ ಮಠ ಕೋವಿಡ್ ಕೇರ್ ಸೆಂಟರ್ ಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಹಾಗೂ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಚಾಲನೆ ನೀಡಿದರು.
ಸದರಿ ಕೋವಿಡ್ ಕೇರ್ ಸೆಂಟರ್ ಅನ್ನು ಸಿದ್ಧಗಂಗಾ ಮಠದ ಮುಖ್ಯರಸ್ತೆಯಲ್ಲಿರುವ ಯಾತ್ರಿ ನಿವಾಸದಲ್ಲಿ ತೆರೆಯಲಾಗಿದ್ದು 80 ಹಾಸಿಗೆಯುಳ್ಳದ್ದಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಸೂಚಿತಗೊಳ್ಳುವ ಕೋವಿಡ್ ಸೋಂಕಿತರಿಗೆ ಐಸೋಲೇಶನ್ ವ್ಯವಸ್ಥೆ ಮಾಡಲಾಗಿದ್ದು ಇಲ್ಲಿ ನೀಡಲಾಗುವ ಊಟ,ಔಷಧಿ ಸೇರಿದಂತೆ ಪ್ರತಿಯೊಂದು ಸೌಲಭ್ಯವೂ ಉಚಿತವಾಗಿರಲಿದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಬಳಕೆಯಾಗುವಂತೆ ಸೀಮಿತ ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಲಾಗಿದ್ದು ಸೋಮವಾರದಿಂದಲೇ ಸೋಂಕಿತರಿಗೆ ಲಭ್ಯವಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಓ ಡಾ.ಕೆ.ವಿದ್ಯಾಕುಮಾರಿ, ಡಿಹೆಚ್ ಓ ಡಾ.ನಾಗೇಂದ್ರಪ್ಪ, ಎಸಿ ಅಜಯ್, ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಸಿದ್ಧಗಂಗಾ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಸಿಇಓ ಶಿವಕುಮಾರಯ್ಯ, ಸಿದ್ಧಗಂಗಾ ಆಸ್ಪತ್ರೆ ಎಂ.ಡಿ. ಡಾ.ಎಸ್.ಪರಮೇಶ್, ಉಪಸ್ಥಿತರಿದ್ದರು.