ಚಿಕ್ಕನಾಯಕನಹಳ್ಳಿ:
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿ ಬಿದ್ದಿದ್ದು, ಸಾಮಾಜಿಕ ಅಂತರವಿಲ್ಲದೆ ಲಸಿಕೆ ನೀಡಲಾಗುತ್ತಿತ್ತು.
ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜನರಿಗೆ ಲಸಿಕೆ ಪಡೆಯುವ ಬಗ್ಗೆ ಆಸಕ್ತಿಬಂದಿದೆ. ಈ ಕಾರಣದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ದಿನದಿಂದ ದಿನಕ್ಕೆ ಹೆಚ್ಚು ಜನ ಬರಲಾರಂಭಿಸಿದ್ದಾರೆ. ಬುಧವಾರವೂ ಸಹ ಸಾರ್ವಜನಿಕ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯಲು ಆಗಮಿಸಿದ್ದರು. ಒಬ್ಬರಿಗೆ ಲಸಿಕೆ ಹಾಕುವುದಕ್ಕೆ ಸಮಯ ಹಿಡಿಯುತ್ತದೆ, ಹೆಸರು, ವಿಳಾಸ, ವಿವರ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿಕೊಂಡು ಲಸಿಕೆ ನೀಡಲು ಕನಿಷ್ಠ 15 ನಿಮಿಷವಾದರೂ ಬೇಕಾಗುತ್ತದೆ. ಅದರಂತೆ ಇಂದು ಲಸಿಕಾ ಕೊಠಡಿಯಲ್ಲಿ ಜನರ ಒತ್ತಡ ಜಾಸ್ತಿಯಿತ್ತು, ಇಲ್ಲಿ ಸಮಾಜಿಕ ಅಂತರವೂ ಇರಲಿಲ್ಲ, ಅಲ್ಲಿ ನಿರ್ವಹಣೆಗೆ ಇದ್ದ ಒಬ್ಬರೇ ಪೊಲೀಸ್ ಸಿಬ್ಬಂದಿ ಅಸಹಾಯಕರಂತೆ ಇದ್ದರು. ಆರೋಗ್ಯಸಿಬ್ಬಂದಿಗಳೂಸಹ ಇದರ ಬಗ್ಗೆ ಗಮನಹರಿಸಿರಲಿಲ್ಲ, ಸಾರ್ವಜನಿಕ ಆಸ್ಪತ್ರೆಗಳಲ್ಲಿಯೇ ಈ ವ್ಯವಸ್ಥೆಯಾದರೆ ಪಟ್ಟಣದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ತುಂಬಿರುತ್ತದೆ. ಇಂತಹ ಸ್ಥಳಗಳಲ್ಲಿ ಯಾವುದೇ ಸಾಮಾಜಿಕ ಅಂತರದ ವ್ಯವಸ್ಥೆಯೂ ಇರುವುದಿಲ್ಲ. ತಾಲ್ಲೂಕು ಆಡಳಿತವಾಗಲಿ ಪುರಸಭಾ ಸಿಬ್ಬಂದಿಗಳಾಗಲಿ ಪೊಲೀಸರಾಗಲಿ ಇಂತಹ ಸ್ಥಳಗಳಿಗೆ ತೆರಳಿ ಎಚ್ಚರಿಕೆ ನೀಡುವುದಾಗಲಿ ಮಾಡದಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ.