ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಎರಡನೇ ಅಲೆಯ ಸಾಂಕ್ರಾಮಿಕ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಹಲವಾರು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೇಯರ್ ಬಿ.ಜಿ. ಕೃಷ್ಣಪ್ಪ ತಿಳಿಸಿದ್ದಾರೆ.
ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪಾಲಿಕೆಯ ಎಲ್ಲಾ ಅಧಿಕಾರಿ/ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸೇರಿ ಒಟ್ಟು 851 ಮಂದಿಗೆ ಕೋವಿಡ್‍ಶೀಲ್ಡ್ ಲಸಿಕೆ ಹಾಕಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ 45 ವಯಸ್ಸು ಮೀರಿದ 44,000 ಸಾರ್ವಜನಿಕರಿಗೆ ಲಸಿಕೆ ಹಾಕಿಸುವ ಕಾರ್ಯ ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿ 35 ವಾರ್ಡ್‍ಗಳಲ್ಲಿ ಹೋಂ ಐಸೋಲೇಷನ್‍ನಲ್ಲಿ ಇರುವ ಕೋವಿಡ್ ಸೋಂಕಿತರ ಪ್ರದೇಶಗಳ ಬಳಿ ಕೋವಿಡ್-19 ಎಚ್ಚರಿಕೆ ಬ್ಯಾನರ್‍ಗಳನ್ನು ಅಳವಡಿಸಲಾಗಿದೆ. ಕೋವಿಡ್-19 2ನೇ ಅಲೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚಿಸಿ ಮಾರ್ಚ್ ಮಾಹೆಯಿಂದ ಈವರೆಗೆ ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ 1,33,000/- ರೂ. ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಸಾರ್ವಜನಿಕರಿಗೆ 62,100/- ರೂ.ಗಳ ದಂಡವನ್ನು ವಿಧಿಸಲಾಗಿದೆ. ಪಾಲಿಕೆ ವ್ಯಾಪ್ತಿಯ 35 ವಾರ್ಡ್ ವಾರು ರಸ್ತೆ ಬೀದಿಗಳನ್ನು ಅಗ್ನಿಶಾಮಕ ದಳದ ವಾಹನಗಳು ಮತ್ತು ಪಾಲಿಕೆಯ ವಾಹನಗಳ ಸಹಾಯದಿಂದ ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಹೋಂ ಐಸೋಲೇಷನ್‍ನಲ್ಲಿ ಇರುವ ಹಾಗೂ ಕೋವಿಡ್ ಸೋಂಕಿನಿಂದ ಮೃತಪಟ್ಟ ರೋಗಿಗಳ ಮನೆಗಳಿಗೂ ಕ್ಷಿಪ್ರಗತಿಯಲ್ಲಿ ಪ್ರಕರಣ ಅನುಸಾರವಾಗಿ ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಕೋವಿಡ್-19 2ನೇ ಅಲೆಯು ಬಹುಬೇಗ ಹರಡುತ್ತಿರುವುದರಿಂದ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸುರಕ್ಷಾಧಿರಿಸುಗಳನ್ನು ವಿತರಿಸಲಾಗಿದೆ. ಕ್ಯಾತ್ಸಂದ್ರದ ಬಳಿ 200 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್‍ನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಪ್ರಾರಂಭಿಸಲಾಗಿದ್ದು, ಸೋಂಕಿತರಿಗೆ ಚಿಕಿತ್ಸೆಯನ್ನು ಆರೋಗ್ಯ ಇಲಾಖೆ ವತಿಯಿಂದ ನೀಡಲಾಗುತ್ತಿದೆ. ಇದಕ್ಕೆ ಮಹಾನಗರಪಾಲಿಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ನಗರದಲ್ಲಿ ಹೋಂ ಐಸೋಲೇಷನ್‍ನಲ್ಲಿ ಇರುವ ಕೋವಿಡ್ ಸೋಂಕಿತರ ಮನೆಗಳಿಗೆ ತೆರಳಿ ಆಕ್ಸಿಮೀಟರ್‍ನಿಂದ ತಪಾಸಣೆ ನಡೆಸಿ ವರದಿ ನೀಡಲು ಸ್ವಯಂಸೇವಕರನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.