ತುಮಕೂರು:
ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ 10500 ರೂ ವೇತನ ನೀಡಬೇಕು,ಕೆಲಸದ ಭದ್ರತೆ, ಪಿ.ಎಫ್ ಮತ್ತು ಇಎಸ್‍ಐ ಹಾಗೂ 3000 ಮಾಸಿಕ ಪಿಂಚಿಣಿಗೆ ಆಗ್ರಹಿಸಿ ಡಿಸೆಂಬರ್ 2 ರಿಂದ ಅಕ್ಷರ ದಾಸೋಹ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತಿರುವುದಾಗಿ ನೌಕರರ ಸಂಘದ ಜಿಲ್ಲಾ ಸಂಚಾಲಕಿ ರಾಧಮ್ಮ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2002ರಿಂದ ಸರಕಾರದ ಈ ಯೋಜನೆಯಲ್ಲಿ ಮಹಿಳೆಯರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಇಂದು ಸಹ ಮುಖ್ಯ ಅಡುಗೆಯವರಿಗೆ ಮಾಸಿಕ 2700 ಮತ್ತು ಅಡುಗೆ ಸಹಾಯಕರಿಗೆ 2600 ರೂ ನೀಡಲಾಗುತ್ತಿದೆ. ಇಂದಿನ ಬೆಲೆ ಹೆಚ್ಚಳದಲ್ಲಿ ಕೇವಲ 2700 ರೂಗಳಿಗೆ ಜೀವನ ನಡೆಸುವುದು ದುಸ್ತರವಾಗಿದೆ. ಮಕ್ಕಳು ಓದು, ಮನೆಯ ಖರ್ಚು ಸೇರಿದಂತೆ ಮನೆ ನಿಭಾಯಿಸುವುದು ಕಷ್ಟವಾಗಿದೆ.ಆದ್ದರಿಂದ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಸರಕಾರವೇ ನಿಗಧಿಪಡಿಸಿರುವಂತೆ ಮಾಸಿಕ 10500 ರೂ ಕನಿಷ್ಠ ವೇತನ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ.ಕಳೆದ 10 ವರ್ಷಗಳಿಂದ ಈ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರೂ ಇದುವರೆಗೂ ಈಡೇರಿಲ್ಲ. ಪ್ರತಿ ಮುಷ್ಕರದ ಸಂದರ್ಭದಲ್ಲಿಯೂ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮುಖ್ಯಮಂತ್ರಿ,ಸಚಿವರುಗಳು ಮಾಡುತ್ತಿದ್ದು, ಈ ಬಾರಿ ಈಗಾಗದಂತೆ, ಸ್ಪಷ್ಟ ಆದೇಶ ಹೊರಡುವವರೆಗೂ ಅನಿರ್ಧಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದರು.
ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಿರುವ ಅಕ್ಷರ ದಾಸೋಹ ನೌಕರರಿಗೆ ಸೇವಾ ಭದ್ರತೆಯಾಗಲಿ, ಫಿ.ಎಫ್., ಇ.ಎಸ್.ಐ ಸೌಲಭ್ಯವಾಗಲಿ ಇಲ್ಲ. ಆರೋಗ್ಯ ಸಮಸ್ಯೆ ತಲೆದೊರಿದರೆ ಅತ್ಯಂತ ಪರಿತಾಪ ಪಡಬೇಕಾಗುತ್ತದೆ. ಆದ್ದರಿಂದ ಸೇವಾ ಭದ್ರತೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಸಿಯೂಟ ನೌಕರರ ಸೇವೆ ಖಾಯಂ, ಜೊತೆಗೆ 10 ಸಾವಿರ ರೂ ವೇತನ ನೀಡುವ ಭರವಸೆ ನೀಡಿದ್ದರೂ, ಸರಕಾರ ಅಧಿಕಾರಕ್ಕೆ ಬಂದ 4 ತಿಂಗಳು ಕಳೆದರೂ ಇದುವರೆಗೂ ಈ ಬಗ್ಗೆ ಚಕಾರವೆತ್ತಿಲ್ಲ. ಇನ್ನೂ ಕೇಂದ್ರದ ನರೇಂದ್ರಮೋದಿ ಸರಕಾರ ಬಿಸಿಯೂಟ ಯೋಜನೆಯನ್ನು ಗುತ್ತಿಗೆ ನೀಡಲು ಮುಂದಾಗಿದೆ. ಕೂಡಲೇ ಬಿಸಿಯೂಟ ಗುತ್ತಿಗೆ ಪ್ರಸ್ತಾವನೆಯನ್ನು ನಿಲ್ಲಿಸಬೇಕು. ಎಲ್ಲರಿಗೂ ಸೇವಾ ಭದ್ರತೆ ಒದಗಿಸಬೇಕೆಂದು ರಾಧಮ್ಮ ಒತ್ತಾಯಿಸಿದರು.
ಬಿಸಿಯೂಟ ತಯಾರಕರು ತಮ್ಮ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 2 ರ ಭಾನುವಾರದಿಂದ ಬೆಂಗಳೂರು ಚಲೋ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಬೃಹತ್ ಮೆರವಣಿಗೆ ಮೂಲಕ ಸ್ವಾತಂತ್ರ ಉದ್ಯಾನವನ ತಲುಪಿ ಮುಷ್ಕರ ಆರಂಭಸಲಿದ್ದು, ಜಿಲ್ಲೆಯಿಂದ ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್,ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್ ಜಿಲ್ಲಾ ಸಂಚಾಲಕ ಸಿ.ಎಸ್.ಸತ್ಯನಾರಾಯಣ,ಮಧುಗಿರಿ ಶೈಕ್ಷಣಿಕ ಜಿಲ್ಲಾ ಸಂಚಾಲಕ ಶಶಿಕಾಂತ್,ಗುಬ್ಬಿಯ ವನಜಾಕ್ಷಮ್ಮ,ಲಕ್ಷ್ಮಿದೇವಮ್ಮ, ತಿಪಟೂರಿನ ನಳಿನ.ಎನ್.ಎಸ್., ತುಮಕೂರಿನ ರೇಣುಕಮ್ಮ, ನಾಗರತ್ನಮ್ಮ ಮತ್ತಿತರರು ಭಾಗವಹಿಸಿದ್ದರು.