ತುಮಕೂರು :
ಕೋವಿಡ್-19 ತಡೆಗಟ್ಟಲು ಹಿನ್ನೆಲೆಯಲ್ಲಿ ಸರ್ಕಾರದ ನೂತನ ಮಾರ್ಗ ಸೂಚಿಗಳಂತೆ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ 40ಕ್ಕಿಂತ ಹೆಚ್ಚಿನ ಜನ ಸೇರದಂತೆ ಈಗಾಗಲೇ ನಿಗಧಿಯಾಗಿರುವ ಮದುವೆ ಕಾರ್ಯವನ್ನು ನೆರವೇರಿಸಿಕೊಳ್ಳಲು ಮಾತ್ರ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್ ಗಳಿಗೆ ಸೂಚಿಸಿದ್ದಾರೆ.
ಮದುವೆ ಕಾರ್ಯ ನೆರವೇರಿಸಿಕೊಳ್ಳು ಸರ್ಕಾರದ ನಿರ್ದೇಶನದಂತೆ ಷರತ್ತುಗಳಿಗೊಳಪಡಿಸಿಯೇ ಅನುಮತಿ ನೀಡಬೇಕು. ಅನುಮತಿ ಪತ್ರ ಮತ್ತು ಗರಿಷ್ಠ 40 ಪಾಸ್ ಗಳನ್ನು ವಿತರಿಸಬೇಕು. ಸದರಿ ಪಾಸ್‍ಗಳು ದುರ್ಬಳಕೆಯಾಗದಂತೆ ಅಗತ್ಯ ಕ್ರಮವಹಿಸಲು ಆಗಿಂದಾಗ್ಗೆ ತಮ್ಮ ವ್ಯಾಪ್ತಿಯಲ್ಲಿ ಪರಿವೀಕ್ಷಣೆ ಕೈಗೊಳ್ಳಬೇಕು. ಕೋವಿಡ್-19 ನಿಯಂತ್ರಣ ಮಾರ್ಗಸೂಚಿಯನ್ನು ಪಾಲಿಸದೇ ಇರುವವರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ತಡೆ ಅಧಿನಿಯಮಗಳ ಅನ್ವಯ ಶಿಸ್ತು ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಸರ್ಕಾರದ ಆದೇಶದಂತೆ, ಕೋವಿಡ್-19 ನಿಯಂತ್ರಣ ಸಂಬಂಧ ಮದುವೆ ಕಾರ್ಯಗಳಿಗೆ 40 ಜನಕ್ಕಿಂತ ಹೆಚ್ಚಿನ ಜನ ಸೇರುವುದನ್ನು ನಿರ್ಬಂಧಿಸಿದೆ. 2 ರಿಂದ10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು ಮತ್ತು ಕೋವಿಡ್-19 ರೋಗದ ಗುಣಲಕ್ಷಣಗಳನ್ನು ಹೊಂದಿರುವವರು ಮದುವೆ ಕಾರ್ಯದಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಕಾರ್ಯಕ್ರಮಕ್ಕೆ ಹಾಜರಾಗುವವರ ಸಂಪೂರ್ಣ ಮಾಹಿತಿಯನ್ನು ಹೊಂದಿರುವ ವಹಿಯನ್ನು ನಿರ್ವಹಿಸಬೇಕು. ಮದುವೆಯನ್ನು ಕಡ್ಡಾಯವಾಗಿ ಮನೆಯಲ್ಲಿಯೇ ನೆರವೇರಿಸಬೇಕು. ಮದುವೆಗೆ ಹಾಜರಿರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರವನ್ನು ಕಾಯ್ದುಕೊಂಡು ಹಾಗೂ ಸ್ಯಾನಿಟೈಸರ್ ಇನ್ನಿತರೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಮದುವೆ ಕಾರ್ಯಕ್ರಮವನ್ನು ಯಾವುದೇ ರೀತಿಯಲ್ಲಿ ಗುಂಪು ಸೇರಿದಂತೆ ಸರಳವಾಗಿ ನಡೆಸಿಕೊಳ್ಳುವುದು ಹಾಗೂ ಬಹಿರಂಗ ಶಾಮಿಯಾನ ಹಾಕಿ ಉಟೋಪಚಾರ ಮಾಡುವುದನ್ನು ನಿರ್ಬಂಧಿಸಿದೆ.
ಮದುವೆಯಾಗುವ ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ತುಂಬಿರಬೇಕು. ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆ. ಮದುವೆ ಅನುಮತಿ ಪತ್ರ ಕೇವಲ ಸದರಿ ಮದುವೆ ಕಾರ್ಯಕ್ರಮಕ್ಕೆ ಮತ್ತು ನಿಗಧಿತ ಸ್ಥಳಕ್ಕೆ ಮಾತ್ರ ಸೀಮಿತವಾಗಿದ್ದು, ಮದುವೆ ದಿನಾಂಕದವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.
ಮದುವೆ ಕಾರ್ಯದ ಆಯೋಜಕರು ತಾಲ್ಲೂಕು ಆಡಳಿತದ ಸೂಚನೆಗಳು ಮತ್ತು ನಿರ್ದೇಶನಗಳಿಗೆ ಬದ್ಧರಾಗಿ ಮದುವೆ ನಡೆಸಬೇಕು. ಕಾರ್ಯಕ್ರಮದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಾಗೂ ಕೋವಿಡ್-19 ಜಾಗೃತಿ ಮತ್ತು ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಆಯೋಜಕರ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಷರತ್ತುಗಳನ್ನು ಉಲ್ಲಂಘಿಸಿ ಕಾರ್ಯಕ್ರಮವನ್ನು ನಡೆಸಿದಲ್ಲಿ, ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ರೋಗ ತಡೆ ಅಧಿನಿಯಮ, ಭಾರತೀಯ ದಂಡ ಸಂಹಿತ ಹಾಗೂ ಅನ್ವಯವಾಗುವಂತಹ ಇತರ ಕಾಯ್ದೆಗಳ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.