ತುಮಕೂರು :
ಕೋವಿಡ್ ಸೋಂಕಿತರ ಆರೈಕೆಗಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ಕೋವಿಡ್ ಕೇರ್ ಸೆಂಟರ್ಗಳಲ್ಲಿಯೂ ನೀರು, ಊಟದ ವ್ಯವಸ್ಥೆ ವ್ಯವಸ್ಥಿತವಾಗಿರಬೇಕು. ಕಾಲ ಕಾಲಕ್ಕೆ ಅನುಗುಣವಾಗಿ ಔಷಧಗಳನ್ನು ಕೊಡಬೇಕು. ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.
ಅಗತ್ಯ ಇರುವ ಸೋಂಕಿತರಿಗೆ ಮಾತ್ರವೇ ಆಕ್ಸಿಜನ್ ನೀಡಬೇಕು. ಸೋಂಕಿತರು ಕೇಳಿತ್ತಾರೆಂಬ ಕಾರಣಕ್ಕೆ ಆಕ್ಸಿಜನ್ ಕೊಡಬಾರದು.ವೈದ್ಯರು ಪರೀಕ್ಷಿಸಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಅಗತ್ಯವಿದ್ದರೆ ಕೊಡಬೇಕು.ಅನಗತ್ಯವಾಗಿ ಆಕ್ಸಿಜನ್ ಕೊಡಬಾರದು ಎಂದು ತಿಳಿಸಿದರು.
ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಬೇಕು. ಹಾಸಿಗೆ, ಆಮ್ಲಜನಕ ಕೊರತೆ ನೀಗಿಸಲು ಕೋವಿಡ್ ಗೆ ಕಡಿವಾಣ ಹಾಕಲೇಬೇಕು. ಆಸ್ಪತ್ರೆಗಳಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ನರ್ಸ್ ಗಳ ಮೇಲೆ ಬಿಡಬಾರದು. ತಮ್ಮ ಕೆಲಸವನ್ನು ತಾವೇ ಅಚ್ಚುಕಟ್ಟಾಗಿ ನಿಭಾಯಿಸಬೇಕು. ಯಾವುದೇ ಗೊಂದಲ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೋಂಕಿತರ ಆರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರತಿ ತಾಲ್ಲೂಕು ಆಸ್ಪತ್ರೆಗಳಿಗೂ ಆಮ್ಲಜನಕದ ಸಾಂದ್ರಕಗಳನ್ನು ನೀಡಲಾಗುವುದು. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಬೇಕು.
ಆಮ್ಲಜನಕ, ಹಾಸಿಗೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಬೇಕು. ಆಸ್ಪತ್ರೆಗಳಿಗೆ ದಾಖಲಾಗುವ ಸೋಂಕಿತರಿಗೆ ಚಿಕಿತ್ಸೆ ನೀಡುವ ಮತ್ತು ಡಿಸ್ಚಾರ್ಜ್ ಆಗುವ ಮಾಹಿತಿಯನ್ನು ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿ, ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೂ ಸೂಕ್ತವಾಗಿ ಚಿಕಿತ್ಸೆ ನೀಡುವುದರೊಂದಿಗೆ ಸದಾ ನಿಗಾವಹಿಸಬೇಕು. ವೈದ್ಯರಿಂದ ಕೋವಿಡ್ ಕಿಟ್ ಪಡೆದು ಅವುಗಳನ್ನು ಸೋಂಕಿತರಿಗೆ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಕೆ. ವಂಶಿಕೃಷ್ಣ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಇತರರಿದ್ದರು.