ತುಮಕೂರು :
ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಜಿಲ್ಲಾಸ್ಪತ್ರೆ ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಇಂದು ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸಾ ವಿಧಾನ, ಆರೈಕೆ ಸೇರಿದಂತೆ ಔಷಧೋಪಚಾರದ ಬಗ್ಗೆ ಪರಿಶೀಲನೆ ನಡೆಸಿದರು.
ಸೋಂಕಿತರಿಗೆ ಯಾವ್ಯಾವ ಆಸ್ಪತ್ರೆಗಳಲ್ಲಿ ಎμÉ್ಟಷ್ಟು ಪ್ರಮಾಣದಲ್ಲಿ ಹಾಸಿಗೆ ನೀಡಲಾಗಿದೆ? ಸೋಂಕಿತರ ಪ್ರಮಾಣ ಎಷ್ಟಿದೆ? ಸಮಸ್ಯೆಯಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆಯಾ? ಎಂಬ ಬಗ್ಗೆಯೂ ಮಾಹಿತಿ ಪಡೆದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು, ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿ ವಾರ್ ರೂಂ ಗೆ ತಲುಪಬೇಕು. ಇದರಿಂದ ಹಾಸಿಗೆ ಅವಶ್ಯಕತೆ ಇರುವವರಿಗೆ ತಕ್ಷಣ ಹಾಸಿಗೆ ವ್ಯವಸ್ಥೆ ಮಾಡಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆಯಾಗಬಾರದು. ನಿಗಧಿಯಂತೆಯೇ ಪರೀಕ್ಷೆಗಳು ಸಕಾಲಕ್ಕೆ ನಡೆಯಬೇಕು. ವರದಿ ಸಮಯಕ್ಕೆ ಸರಿಯಾಗಿ ತಲುಪಬೇಕು. ಹಾಸಿಗೆಗಳ ಸಮಸ್ಯೆ, ಔಷಧ ಸಮಸ್ಯೆ ಉಂಟಾಗದಂತೆ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.
ಸೋಂಕಿತರಿಗೆ ಹಾಸಿಗೆಗಳನ್ನು ಒದಗಿಸುವ ಕಾರ್ಯ ಸಮರ್ಪಕವಾಗಿ ನಿರ್ವಹಿಸಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಒಂದೇ ರೀತಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯಕ್ಕನುಗುಣವಾಗಿ ಆಮ್ಲಜನಕ ಸಾಂದ್ರಕಗಳನ್ನು ನೀಡುವ ಕುರಿತು ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಎಸ್ಪಿ ಡಾ.ಕೆ. ವಂಶಿಕೃಷ್ಣ, ಸಿಇಓ ವಿದ್ಯಾಕುಮಾರಿ, ಡಿಹೆಚ್ಓ ನಾಗೇಂದ್ರಪ್ಪ, ಡಿಎಸ್. ಡಾ. ಸುರೇಶ್ ಬಾಬು, ಸೇರಿದಂತೆ ವೈದ್ಯಾಧಿಕಾರಿಗಳು ಹಾಜರಿದ್ದರು.
ಸಭೆಗೂ ಮುನ್ನಾ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ಅಡಿಪಾಯಕ್ಕೆ ಚಾಲನೆ ನೀಡಿದರು. ನಂತರ ನಗರದ ಚಿಕ್ಕ ಪೇಟೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಟಿಎಂಸಿ ಬ್ಯಾಂಕ್ ನ ಸಂಚಾರಿ ಎ.ಟಿಎಂ.ಗೆ ಚಾಲನೆ ನೀಡಿದರು.