ತುಮಕೂರು:

      ಕೋವಿಡ್ ಎರಡನೇ ಅಲೆ ಶಿಕ್ಷಣರಂಗಕ್ಕೆ ಒಡ್ಡಿರುವ ಸವಾಲುಗಳ ನಡುವೆಯೂ ತುಮಕೂರು ವಿಶ್ವವಿದ್ಯಾ ನಿಲಯವು ಯಶಸ್ವಿ ಆನ್ಲೈನ್ ತರಗತಿಗಳನ್ನು ನಡೆಸುವ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸಿಕೊಟ್ಟಿದೆ.

      ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಕೊನೆಯ ಹಂತದಲ್ಲಿ ಲಾಕ್ಡೌನ್ ಘೋಷಣೆ ಯಾಗಿ ಒಂದೆರಡು ಪರೀಕ್ಷೆಗಳು ಉಳಿದುಕೊಂಡರೂ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಹೊಸ ಸೆಮಿಸ್ಟರಿನ ಪಾಠಪ್ರವಚನಗಳನ್ನು ಆನ್ಲೈನ್ ವಿಧಾನದಲ್ಲಿ ವ್ಯವಸ್ಥಿತವಾಗಿ ಆರಂಭಿಸಲಾಗಿದೆ.

      ಮೇ 3ರಿಂದ ಸ್ನಾತಕೋತ್ತರ ತರಗತಿಗಳನ್ನೂ, ಮೇ 5ರಿಂದ ಪದವಿ ತರಗತಿಗಳನ್ನೂ ಆನ್ಲೈನ್ ಮುಖಾಂತರ ಆರಂಭಿಸಿದ್ದೇವೆ. ಪದವಿಯಲ್ಲಿ ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‍ಗಳು ಮತ್ತು ಸ್ನಾತಕೋತ್ತರ ಹಂತದಲ್ಲಿ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್‍ಗಳು ನಡೆಯುತ್ತಿವೆ. ಕಳೆದೆರಡು ವಾರಗಳಿಂದ ಪಾಠಪ್ರವಚನಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಹೇಳಿದ್ದಾರೆ.

      ಸ್ನಾತಕೋತ್ತರ ವಿಭಾಗಗಳು ಹಾಗೂ ಸಂಯೋಜಿತ ಕಾಲೇಜುಗಳ ಪ್ರತಿದಿನದ ಪಾಠ ಪ್ರವಚನಗಳ ಮಾಹಿತಿಗಾಗಿ ವಿಶ್ವವಿದ್ಯಾನಿಲಯವು ಗೂಗಲ್ ಸ್ಪ್ರೆಡ್‍ಶೀಟನ್ನು ಬಳಸುತ್ತಿದೆ. ಆಯಾ ವಿಭಾಗಗಳ ಅಧ್ಯಾಪಕರು ತಾವು ವೇಳಾಪಟ್ಟಿಯಂತೆ ಮಾಡಿದ ಪಾಠದ ವಿವರಗಳನ್ನು ಹಾಗೂ ತರಗತಿಗೆ ಹಾಜರಾದ ವಿದ್ಯಾರ್ಥಿಗಳ ವಿವರವನ್ನು ಇದರಲ್ಲಿ ಅಪ್ಡೇಟ್ ಮಾಡುತ್ತಾರೆ.

      ಮಾಹಿತಿ ತಂತ್ರಜ್ಞಾನದ ಸಂಪೂರ್ಣ ಲಾಭವನ್ನು ಪಡೆಯುವುದಕ್ಕೆ ಇದು ಸಕಾಲ. ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವತ್ತ ತುಮಕೂ ರು ವಿವಿಯು ಗಂಭೀರ ಹೆಜ್ಜೆ ಇಟ್ಟಿದೆ. ಇದಕ್ಕೆ ಬೆಂಬಲ ನೀಡುತ್ತಿರುವ ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಕುಲಪತಿ ತಿಳಿಸಿದ್ದಾರೆ. ಗೂಗಲ್ ಮೀಟ್, ಜೂಮ್ ಮೀಟಿಂಗ್ ಹಾಗೂ ಯೂಟ್ಯೂಬ್‍ನಂತಹ ಮಾಧ್ಯಮ ಗಳನ್ನು ಬಳಸಿ ಅಧ್ಯಾಪಕರು ಪ್ರತಿಕ್ರಿಯಾತ್ಮಕ ತರಗತಿಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿ ಗಳು ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ.

      “ಕಳೆದ ವರ್ಷದ ಅನುಭವದಿಂದ ಈ ವರ್ಷದ ಸವಾಲನ್ನು ಎದುರಿಸುವುದು ಸುಲಭವೆನಿಸಿದೆ. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು- ಎರಡೂ ಕಡೆಯಿಂದಲೂ ಉತ್ತಮ ಸಹಕಾರ ದೊರಕಿದೆ. ಇಬ್ಬರೂ ಪರ್ಯಾಯ ವ್ಯವಸ್ಥೆಯನ್ನು ಮುಕ್ತವಾಗಿ ಸ್ವೀಕರಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಶಿಕ್ಷಣ ಮುಂದುವರಿಸಬೇಕಾದರೆ ಇದೇ ಅತ್ಯುತ್ತಮ ವಿಧಾನ ಎಂಬುದು ವಿದ್ಯಾರ್ಥಿಗಳಿಗೆ ಮನವರಿಕೆ ಆಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

      ಸ್ನಾತಕೋತ್ತರ ವಿಭಾಗಗಳಲ್ಲಿ ಶೇ. 90ರಷ್ಟು ಹಾಜರಾತಿ ಇದೆ. ಕೆಲವು ಅಧ್ಯಾಪಕರು ಇನ್ನಷ್ಟು ನವೀನ ವಿಧಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯ ಪಾಠಗಳ ಕೊರತೆ ಕಾಣದಂತೆ ಪ್ರಯತ್ನಿಸುತ್ತಿದ್ದಾರೆ. ಬದುಕಿನ ಬಗ್ಗೆ ಕನಸು ಕಟ್ಟಿಕೊಂಡಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ಎಂಬುದು ನನ್ನ ಭಾವನೆ. ಈ ಕರ್ತವ್ಯಕ್ಕೆ ಲಾಕ್ಡೌನ್ ಕೂಡ ಅಡ್ಡಿಯಾಗಬಾರದು. ನಾವು ಜ್ಞಾನ ಅರ್ಥ ವ್ಯವಸ್ಥೆಯಲ್ಲಿ ಬದುಕುತ್ತಿರುವಾಗ ಅದು ಅಪೇಕ್ಷಿಸುವ ಗುಣಮಟ್ಟವನ್ನು ಕೊಡುವುದು ಜವಾಬ್ದಾರಿ. ನಮ್ಮ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರವೂ ಮೆಚ್ಚಿಕೊಂಡಿದೆ ಎಂದು ಪ್ರೊ. ಸಿದ್ದೇಗೌಡ ತಿಳಿಸಿದ್ದಾರೆ. ಉದಾಹರಣೆಗೆ, ಅನೇಕ ಅಧ್ಯಾಪಕರು ಗೂಗಲ್ ಕ್ಲಾಸ್‍ರೂಂ ಅನ್ನು ಬಳಸುತ್ತಿದ್ದಾರೆ. ಲ್ಯಾಪ್‍ಟಾಪ್ ಮೂಲಕ ಪಾಠ ಮಾಡುವಾಗಲೇ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ ಮಾಡಿ, ಅದೇ ಪಾಠವನ್ನು ಯೂಟ್ಯೂಬಿನಲ್ಲಿ ಪ್ರಕಟಿಸಲಾಗುತ್ತದೆ. ಅದರ ಲಿಂಕ್ ಅನ್ನು ಗೂಗಲ್ ಕ್ಲಾಸ್ ರೂಮಿನಲ್ಲಿ ಪ್ರಕಟಿಸುವುದರಿಂದ ನೆಟ್ವರ್ಕ್ ಸಮಸ್ಯೆಯಿಂದ ಲೈವ್ ತರಗತಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ತಮ್ಮ ಅನುಕೂಲದ ಸಮಯದಲ್ಲಿ ಪಾಠಗಳನ್ನು ಕೇಳಬಹುದಾಗಿದೆ. ಇದೇ ವೇದಿಕೆಯಲ್ಲಿ ಅಧ್ಯಯನ ಸಾಮಗ್ರಿ ಹಂಚಿಕೊಳ್ಳಲು, ಪುನರಾವರ್ತನೆ ಪರೀಕ್ಷೆಗಳನ್ನು ನಡೆಸಲು ಹಾಗೂ ನಿಯೋಜಿತ ಕಾರ್ಯಗಳನ್ನು ನೀಡಲು ಅವಕಾಶವಿದೆ ಎಂದರು.

(Visited 10 times, 1 visits today)