ತುಮಕೂರು:
ರಾಜ್ಯದ ಎಲ್ಲರಿಗೂ 2021ರ ವರ್ಷದ ಅಂತ್ಯದೊಳಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ಪೋರ್ಟಲ್‍ನಲ್ಲಿ ಯಾರು ಎಲ್ಲಿಯಾದರೂ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದಾದ ವ್ಯವಸ್ಥೆಯಿರುವುದರಿಂದ ಬೆಂಗಳೂರಿಗರು ಅಕ್ಕಪಕ್ಕದ ನೆರೆಯ ಜಿಲ್ಲೆಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಆಯಾ ಜಿಲ್ಲೆಯ ಜನರು ಜಿಲ್ಲೆಯಲ್ಲಿ ಮಾತ್ರ ಲಸಿಕೆ ಪಡೆಯುವಂತೆ ಮಾಡುವ ಸಲುವಾಗಿ ರಾಜ್ಯಮಟ್ಟದ ಪೋರ್ಟಲ್ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 2015 ವೈದ್ಯರ ನೇಮಕಾತಿ ಆದೇಶ ಆಗಿದ್ದು, ನೇಮಕಾತಿ ಆದೆ ೀಶ ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿಯೂ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ವೈದ್ಯರು ನೇಮಕಗೊಳ್ಳಲಿದ್ದಾರೆ. ಸೋಮವಾರದಿಂದ ಬುಧವಾರದೊಳಗೆ ನೇಮಕಗೊಂಡ ವೈದ್ಯರು ಸೇವೆಗೆ ಹಾಜರಾಗಲಿದ್ದಾರೆ. ಇದರಿಂದ ವೈದ್ಯರ ಕೊರತೆ ಸಮಸ್ಯೆ ಬಗೆಹರಿಯಲಿದೆ. ಇದರ ಜೊತೆಗೆ ಆರೋಗ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯಿಂದ ಜಿಲ್ಲೆಗೆ 6 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನೀಡಲಾಗುವುದು. ಈಗಾಗಲೇ ಜಿಲ್ಲಾಸ್ಪತ್ರೆಗೆ ಬುಧವಾರ 25 ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗಿದ್ದು, ಕೋವಿಡ್ ಔಷಧಗಳನ್ನು ಅಗತ್ಯಕ್ಕಿಂತಲೂ ಹೆಚ್ಚುವರಿಯಾಗಿ ಪೂರೈಕೆ ಮಾಡಲಾಗುವುದು. ಸೋಂಕು ದೃಢಪಟ್ಟ ಸೋಂಕಿತನಿಗೆ 4-5 ಗಂಟೆಯೊಳಗೆ ಕೋವಿಡ್ ಮೆಡಿಕಲ್ ಕಿಟ್ ಅನ್ನು ತಲುಪಿಸಬೇಕು. ಪ್ರತಿ ತಾಲೂಕಿನಲ್ಲಿಯೂ ಶಾಸಕರು, ಅಧಿಕಾರಿಗಳು ಕ್ರಿಯಾಶೀಲರಾಗಿ ಪರಿಣಾಮಕಾರಿಯಾಗಿ ಸೋಂಕಿತರಿಗೆ ಮೊದಲನೆ ದಿನದಿಂದಲೇ ಆರೈಕೆ ಮಾಡಲು ಪ್ರಾರಂಭಿಸಬೇಕು. ಇದರಿಂದ ಸೋಂಕಿತರಿಗೆ ಗಂಭೀರ ಸಮಸ್ಯೆಗಳು ಉಂಟಾಗಲ್ಲ.
ಸೋಂಕಿತರಿಗೆ ತಡವಾಗಿ ಚಿಕಿತ್ಸೆ ನೀಡಿದರೆ ಗಂಭೀರ ಸ್ಥಿತಿಗೆ ತಲುಪುತ್ತಾರೆ. ಹಾಗಾಗಿ ಪ್ರಾರಂಭದಿಂದಲೇ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕು ಎಂದು ನಿರ್ದೇಶಿಸಿದರು.
ಮೂರನೇ ಅಲೆ ಕಡಿವಾಣಕ್ಕೆ ಆರೋಗ್ಯ ಇಲಾಖೆ ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡಿಕೊಂಡು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗುತ್ತಿದೆ. ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆಂಬುಲೆನ್ಸ್‍ಗಳಿಗೂ ದರ ನಿಗಧಿ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಶ್ರೀದೇವಿ ಮತ್ತು ಸಿದ್ಧಾರ್ಥ ಮೆಡಿಕಲ್ ಕಾಲೇಜು ಸೇರಿದಂತೆ ಎರಡೂ ಕಾಲೇಜುಗಳು ಕನಿಷ್ಟ 500 ಆಮ್ಲಜನಕ ಹಾಸಿಗೆಗಳನ್ನು ಹೆಚ್ಚು ಮಾಡಬೇಕು. ಅಂತಿಮ ವರ್ಷದ ನಸಿರ್ಂಗ್ ವಿದ್ಯಾರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಸೇವೆಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರದ ಆದೇಶದಂತೆ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ 75% ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 50% ಹಾಸಿಗೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಬಿಇಎಲ್, ರೋಟರಿ, ವಿಪ್ರೋ ಸಂಸ್ಥೆಯವರು ಆಮ್ಲಜನಕ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದಾರೆ. ಹಾಗಾಗಿ ಎಲ್ಲಾ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸ್ವಯಂ ಆಮ್ಲಜನಕ ಉತ್ಪಾದನೆ ಮಾಡಿಕೊಳ್ಳಲು ಅವಕಾಶ ಇದೆ. ಆದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗು ಇನ್ನೂ 50 ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲದೆ, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿಗೆ 50-100 ಹಾಸಿಗೆಗಳ ಸಮುದಾಯ ಆಸ್ಪತ್ರೆ ಕೊಡಬೇಕು. ಇದರಿಂದ ಮುಂಬರುವ ಕೋವಿಡ್ ಅಲೆಯಲ್ಲಿ ಪ್ರತಿ ತಾಲೂಕಿನಲ್ಲಿಯೂ 100 ಹಾಸಿಗೆಗಳ ವ್ಯವಸ್ಥೆಯಾಗಲಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಗ್ರಹವನ್ನು ಸಮರ್ಪಕವಾಗಿ ಮಾಡಬಹುದು ಎಂದು ಸಚಿವರಿಗೆ ಮನವಿ ಮಾಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಜಿಲ್ಲಾಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ವಾರಗಟ್ಟಲೆ ಕೆಲಸ ಮಾಡುತ್ತಿಲ್ಲ ಎಂಬ ಸಬೂಬು ಕೊಡಬಾರದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ಅವರಿಗೆ ಸೂಚಿಸಿದರು.
ಜನರಲ್ ಬೆಡ್ ಮೇಲೆ ಚಿಕಿತ್ಸೆ ನೀಡಿ ಐಸಿಯು ಬೆಡ್ ಚಿಕಿತ್ಸೆಯ ಬಿಲ್ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೋದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು 50 ಸಾವಿರ ಮಾಸ್ಕ್ ಮತ್ತು 5 ಸಾವಿರ ಸ್ಯಾನಿಟೈಸರ್, 500-600 ಪಲ್ಸ್ ಆಕ್ಸಿಮೀಟರ್ ದಾನ ನೀಡಿದ್ದು, ಗ್ರಾಮ ಮಟ್ಟದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.